ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇನ್ನು ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಜಾರ್ಮಿನು ಅರ್ಜಿ ಕುರಿತು ಸರ್ಕಾರದ ಅಭಿಯೋಜಕ ಎಸ್ಪಿಪಿ ಪ್ರಸನ್ನಕುಮಾರ್ ಹಾಗೂ ದರ್ಶನ್ ಪರ ವಕೀಲ ಸಿ. ವಿ. ನಾಗೇಶ್ ಅವರ ಸುದೀರ್ಘ ವಾದ - ಪ್ರತಿವಾದ ಆಲಿಸಿದ್ದ 57ನೇ ಸಿಸಿಹೆಚ್ ನ್ಯಾಯಾಲಯ ಇಂದು ಆದೇಶ ಪ್ರಕಟಿಸಿತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಪ್ರಕರಣದ ಮೊದಲ ಆರೋಪಿತೆ ಪವಿತ್ರಾ ಗೌಡ, ಎ2 ದರ್ಶನ್, ಎ11 ನಾಗರಾಜ್, ಎ12 ಲಕ್ಷ್ಮಣ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿ, ಎ8 ರವಿಶಂಕರ್ ಹಾಗೂ ಎ13 ದೀಪಕ್ಗೆ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ. ಅರ್ಜಿ ವಜಾ ಹಿನ್ನೆಲೆಯಲ್ಲಿ ದರ್ಶನ್ ಸೇರಿ ನಾಲ್ವರು ಆರೋಪಿಗಳು ಮುಂದಿನ 14 ದಿನಗಳ ಕಾಲ ಜೈಲಿನಲ್ಲೇ ಇರಬೇಕಾಗಿದೆ. ಇನ್ನು ಜಾಮೀನು ಕೋರಿ ದರ್ಶನ್ ಪರ ವಕೀಲರು ನಾಳೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಪ್ರಕರಣದ ಎರಡನೇ ಆರೋಪಿ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ಚಾರ್ಜ್ ಶೀಟ್ನಲ್ಲಿನ ಲೋಪದೋಷಗಳ ಬಗ್ಗೆ ಪ್ರಬಲ ವಾದಕ್ಕೆ ಸರ್ಕಾರಿ ಪರ ಅಭಿಯೋಜಕ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದ್ದರು. ಸಾಕ್ಷಿಗಳ ಸೃಷ್ಟಿ, ಸಾಂದರ್ಭಿಕ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಪೊಲೀಸರು ಹುಟ್ಟುಹಾಕಿದ್ದಾರೆ ಎಂದು ವಾದ ಮಂಡಿಸಿದ್ದರು. ಪವಿತ್ರಾ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ಅವರು, ತಮ್ಮ ಕಕ್ಷಿದಾರರು ಹತ್ಯೆ ಒಳಸಂಚಿನಲ್ಲಿ ಭಾಗಿಯಾಗಿಲ್ಲ. ಕೃತ್ಯ ನಡೆದ ಸ್ಥಳಕ್ಕೆ ಹೋಗಿ ರೇಣುಕಾಸ್ವಾಮಿಯ ಕಪಾಳಕ್ಕೆ ಹೊಡೆದಿದ್ದರು. ಇದರಿಂದಲೇ ಮರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ನಮೂದಿಸಿಲ್ಲ. ಹೀಗಾಗಿ ಜಾಮೀನು ಅರ್ಜಿ ಪುರಸ್ಕರಿಸಬೇಕೆಂದು ವಾದ ಮಂಡಿಸಿದ್ದರು. ಇದಕ್ಕೆ ಎಸ್ಪಿಪಿ ಪ್ರಸನ್ನಕುಮಾರ್, ಪ್ರಬಲವಾಗಿ ವಾದ ಮಂಡಿಸಿದ್ದರು.
ಸಮರ್ಥವಾಗಿ ವಾದ ಮಂಡಿಸಿದ್ದ ಎಸ್ಪಿಪಿ ಪ್ರಸನ್ನ ಕುಮಾರ್, ಗೌತಮ್ ಎಂಬ ಹೆಸರಿನಲ್ಲಿ ರೇಣುಕಾಸ್ವಾಮಿ ಫೆಬ್ರುವರಿಯಿಂದಲೂ ಪವಿತ್ರಾಗೌಡಗೆ ಆಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ. ಮರ್ಮಾಂಗ ಫೋಟೋ ಕಳುಹಿಸಿದ್ದ. ಕೇವಲ ಒಂದು ಬ್ಲಾಕ್ ಬಟನ್ ಒತ್ತಿ, ಪೊಲೀಸರಿಗೆ ದೂರು ನೀಡಿದ್ದರೆ ಕ್ರಮವಾಗುತಿತ್ತು. ಇದಾವುದು ಮಾಡದೇ ದರ್ಶನ್ ಅಂಡ್ ಗ್ಯಾಂಗ್ ತಿಳಿಸುವ ಮೂಲಕ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ ಎಂದು ವಾದ ಮಂಡಿಸಿದ್ದರು.
ರೇಣುಕಾಸ್ವಾಮಿ ಎಂಬ ವ್ಯಕ್ತಿ ಇದ್ದಾನೆ ಎಂಬ ಮಾಹಿತಿ ಆರೋಪಿಗಳಿಗಿರಲಿಲ್ಲ ಎಂದು ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಪ್ರತಿವಾದಿಸಿದ ಎಸ್ಪಿಪಿ, ರೇಣುಕಾಸ್ವಾಮಿಗೆ ಆರೋಪಿಗಳು ಪರಿಚಯವಾಗಿರುವ ದಾಖಲಾತಿಗಳಿವೆ. ಜೂ.6ರಂದೇ ಪವಿತ್ರಾ, ಪವನ್, ಧನರಾಜ್ ಸೇರಿ ಇತರರು ಕರೆ ವಿನಿಮಯ ಮಾಡಿರುವುದು, ಆರೋಪಿಗಳೆಲ್ಲರೂ ಅಪಹರಿಸಿ ಹತ್ಯೆಯಾದ ಜಾಗದಲ್ಲಿದ್ದರು ಎಂಬುದಕ್ಕೆ ಟವರ್ ಲೋಕೆಷನ್ ಹಾಗೂ ಟೆಕ್ನಿಕಲ್ ಸಾಕ್ಷಿಗಳಿಂದ ರುಜುವಾಗಿದೆ. ರೇಣುಕಾಸ್ವಾಮಿಯನ್ನ ಅಪಹರಿಸಿ ಕರೆ ತರುವಾಗ ಇಟಿಯೋಸ್ ಕಾರಿನಲ್ಲಿ ಬರುವಾಗ ಆರೋಪಿಗಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೂ.8ರಂದು ಮಧ್ಯಾಹ್ನ 1.32ಕ್ಕೆ ಅಪಹರಣಕಾರರು ಪಟ್ಟಣಗೆರೆ ಶೆಡ್ ಬಂದಿದ್ದಾರೆ. ಎ3ಯಿಂದ 9ರ ವರೆಗೆ ರೇಣುಕಾಸ್ವಾಮಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಬಳಿಕ ಫೋಟೊವನ್ನ ಆರೋಪಿ ವಿನಯ್ ಕಳುಹಿಸಿದ್ದರು. ಪಟ್ಟಣಗೆರೆಯ ಭದ್ರತಾ ಸಿಬ್ಬಂದಿ ಆರೋಪಿಗಳು ಸ್ಥಳದಲ್ಲಿರುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಪ್ರಸನ್ನಕುಮಾರ್ ವಾದಿಸಿದ್ದರು.