ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ರಭಾವಿ ರಾಜಕೀಯ ಕುಟುಂಬಗಳ ಮೊರೆ ಹೋಗಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಇದೇ ಮಾರ್ಚ್ 10 ರೊಳಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಸಜ್ಜಾಗಿದೆ.
15 ಕ್ಷೇತ್ರಗಳ ಪೈಕಿ ಏಕೈಕ ಅಭ್ಯರ್ಥಿ ಹೆಸರನ್ನು ಕೆಪಿಸಿಸಿ, ಎಐಸಿಸಿಗೆ ಕಳುಹಿಸಿದ್ದು, ಇದಕ್ಕೆ ಹಸಿರು ನಿಶಾನೆ ಸಿಕ್ಕಿ ಪಟ್ಟಿ ಹೊರಬೀಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಕಡೇ ಗಳಿಗೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಕುಸುಮಾ ಜೊತೆಗೆ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಹೆಸರು ಮುನ್ನೆಲೆಗೆ ಬಂದಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ, ದಿವಂಗತ ಬಂಗಾರಪ್ಪ, ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕಾಶೆಪ್ಪನವರ್ ಸೇರಿದಂತೆ ಪ್ರಮುಖ ರಾಜಕೀಯ ಕುಟುಂಬಕ್ಕೆ ಸೇರಿದವರಿಗೆ ಮೊದಲ ಪಟ್ಟಿಯಲ್ಲಿ ಪ್ರಾತಿನಿಧ್ಯ ದೊರೆತಿದೆ. ಮೊದಲ ಪಟ್ಟಿಯಲ್ಲೇ ಶಿವಕುಮಾರ್ ಸಹೋದರ ಹಾಲಿ ಸಂಸದ ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಮೀಸಲು ಕ್ಷೇತ್ರದಿಂದ ಮಹದೇವಪ್ಪ ಪುತ್ರ ಸುನೀಲ್ ಬೋಸ್, ಬಾಗಲಕೋಟೆಯಿಂದ ಶಾಸಕ ವಿಜಯಾನಂದ ಕಾಶೆಪ್ಪನವರ್ ಅವರ ಪತ್ನಿ ವೀಣಾ ಕಾಶೆಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸಲು ಕೆಪಿಸಿಸಿ, ಎಐಸಿಸಿಗೆ ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ.
ಉಳಿದಂತೆ ಮೊದಲ ಪಟ್ಟಿಯಲ್ಲೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಎಂ ಲಕ್ಷ್ಮಣ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಟಾರ್ ಚಂದ್ರು. ಬಂಗಾರಪ್ಪ ಅವರ ಪುತ್ರಿ ಹಾಗೂ ಸಚಿವ ಮಧುಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಹಿರಿಯ ನಾಯಕ ಎಸ್.ಪಿ. ಮುದ್ದಹನುಮೇಗೌಡ, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಳ್ಳಾರಿ ಮೀಸಲು ಲೋಕಸಭಾ ಕ್ಷೇತ್ರದಿಂದ ವಿ.ಎಸ್. ಉಗ್ರಪ್ಪ, ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಮಾಜಿ ಸಂಸದ ಚಂದ್ರಪ್ಪ, ಬೀದರ್ ಲೋಕಸಭಾ ಕ್ಷೇತ್ರದಿಂದ ರಾಜಶೇಖರ ಪಾಟೀಲ್, ದಾವಣಗೆರೆಯಿಂದ ವಿನಯ್, ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್ ಅವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.