ಹುಬ್ಬಳ್ಳಿ:ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದ್ದು, ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಪೈಪೋಟಿ ಇದೆ. ಹಲವರು ಹಿರಿಯ, ಕಿರಿಯ ನಾಯಕರು ಟಿಕೆಟ್ಗೋಸ್ಕರ ತೆರೆಮರೆಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಆಕಾಂಕ್ಷಿಗಳಲ್ಲೊಬ್ಬರಾದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ 'ರಜತ್ ಸಂಭ್ರಮ' ಕಾರ್ಯಕ್ರಮ ಆಯೋಜಿಸಿ ಗಮನ ಸೆಳೆದಿದ್ದಾರೆ.
ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಳಿಯನಾಗಿರುವ ರಜತ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಗಳಿಂದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ, ಪರಿಣಾಮ ಇವರಿಗೆ ಟಿಕೆಟ್ ಕೈ ತಪ್ಪಿತ್ತು. ಆದರೆ, ಶೆಟ್ಟರ್ ಸೋಲು ಕಂಡರು. ಇದೀಗ, ಲೋಕಸಭೆ ಚುನಾವಣೆಗೂ ಮುನ್ನವೇ ಜಗದೀಶ್ ಶೆಟ್ಟರ್ ಬಿಜೆಪಿಗೆ ಮರಳಿದ್ದಾರೆ. ಇನ್ನೊಂದೆಡೆ, ರಜತ್ ಉಳ್ಳಾಗಡ್ಡಿಮಠ ಅವರು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಅಣಿಯಾಗುತ್ತಿದ್ದಾರೆ.
ರಜತ್ಗೆ ಆಶೀರ್ವಾದ ಮಾಡಿ ಎಂದ ಹೆಬ್ಬಾಳ್ಕರ್:ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ತಮ್ಮ ಅಳಿಯ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದರು. ''ರಜತ್ ಉಳ್ಳಾಗಡ್ಡಿಮಠ ನನ್ನ ಅಳಿಯ ಎಂಬ ಕಾರಣಕ್ಕೆ ರಾಜಕಾರಣದಲ್ಲಿ ಬಂದಿಲ್ಲ. ನನ್ನ ಮಗಳನ್ನು ಮದುವೆ ಆಗುವುದಕ್ಕೆ ಮುನ್ನವೇ ಅವರ ತಂದೆಯೂ ರಾಜಕೀಯದಲ್ಲಿದ್ದರು. ತಂದೆಯ ಸಾವಿನ ನಂತರವೂ ಸಮಾಜಕ್ಕೆ ಸೇವೆ ಮಾಡಲು ರಜತ್ ಮುಂದಾಗಿದ್ದಾನೆ. ನನ್ನ ಅಳಿಯನಾಗದಿದ್ದರೆ ರಾಜಕೀಯವಾಗಿ ಇನ್ನೂ ಮುಂದೆ ಬರುತ್ತಿದ್ದ. ತಂದೆ ಇಲ್ಲದ ಮಗನ ಸೇವೆ ಪರಿಗಣಿಸಿ, ನಿಮ್ಮ ಮಗನಂತೆ ಆಶೀರ್ವಾದ ಮಾಡಿ'' ಎಂದು ಮನವಿ ಮಾಡಿದರು.