ಧಾರವಾಡ: ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ಏನೂ ಮಾಡಬೇಡಿ. ಅನಗತ್ಯವಾಗಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡಬೇಡಿ. ತೊಂದರೆ ಕೊಟ್ಟರೆ ನಾನೇ ಬಂದು ನಿಮ್ಮೆದುರು ನಿಲ್ಲುವೆ. ಈ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಧಾರವಾಡ ತಾಲೂಕಿನ ತಡಕೋಡ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಾವು ಸುಮ್ಮನಿರುವುದಿಲ್ಲ. ಭಾರತ ಸರ್ಕಾರ ನಮ್ಮದೇ ಇದೆ. ಈ ಕಾಂಗ್ರೆಸ್ ಸರ್ಕಾರ ಬಹಳ ದಿನ ಇರುವುದಿಲ್ಲ. ಸಿದ್ದರಾಮಯ್ಯ - ಡಿಕೆಶಿ ನಡುವಿನ ಒಳ ಜಗಳ ಇದ್ದೇ ಇದೆ. ಸಿದ್ದರಾಮಯ್ಯ ಅವರನ್ನು ಇಳಿಸಬೇಕೆಂದು ಡಿಕೆಶಿ ಹೊರಟಿದ್ದಾರೆ. ಡಿಕೆಶಿಯವರನ್ನು ಒಳಗೆ ಹಾಕಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಇರುವುದಿಲ್ಲ. ಪರಸ್ಪರ ಸಂಶಯ ಇಟ್ಟುಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಸೇರಿ ಅತ್ಯುತ್ತಮ ಪ್ರಚಾರದ ನಿರ್ಧಾರ ಮಾಡಿದ್ದೇವೆ. ರಾಜ್ಯದಲ್ಲಿ 28 ಸ್ಥಾನವನ್ನು ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ದೇಶದ ಅಭಿವೃದ್ಧಿ ವಿರೋಧಿ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದು ಆರೋಪಿಸಿದರು.
ಕಾಂಗ್ರೆಸ್ 65 ವರ್ಷ ಆಡಳಿತ ನಡೆಸಿದೆ. ಮೋದಿ ಬಂದ ಮೇಲೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಇಂದು ಭಾರತ ಜಗತ್ತಿನ ಐದನೇ ಪ್ರಬಲ ದೇಶವಾಗಿದೆ. ಇದು ಸಾಧ್ಯವಾಗಿಸಿದ್ದು ನರೇಂದ್ರ ಮೋದಿ ಅವರು. ಕಾಂಗ್ರೆಸ್ ಅವಧಿಯ ಕೊಳಚೆ ಸ್ವಚ್ಛಗೊಳಿಸಲು ಐದು ವರ್ಷ ತೆಗೆದುಕೊಂಡಿದ್ದೇವೆ. ಹೀಗಾಗಿ ಮೂರನೇ ಅವಧಿಗೆ ಮೋದಿ ಗ್ಯಾರಂಟಿ ಕೊಡುತ್ತಿದ್ದೇವೆ ಎಂದರು.
ರಾಹುಲ್ ಗಾಂಧಿ ಬಿಟ್ಟು ಎಲ್ಲರೊಂದಿಗೂ ನಾನು ಮಾತನಾಡುವೆ. ಯಾಕಂದ್ರೆ ರಾಹುಲ್ ಬಾಬಾ ಮಾತನಾಡಿದ್ದು, ನಮಗೆ ತಿಳಿಯೋದಿಲ್ಲ. ಕಲಾವತಿ, ಲೀಲಾವತಿ ಅಂತಾ ಏನೆನೋ ಮಾತನಾಡುತ್ತಾರೆ. ಅವರಿಗೆ ಚೀಟಿಯಲ್ಲಿ ಬರೆದು ಕೊಡ್ತಾರೆ. ಅದನ್ನಷ್ಟೇ ಹೇಳುತ್ತಾರೆ. ಎಂಟೆಂಟು ದಿನ ಅದನ್ನೇ ಪುನರಾವರ್ತಿಸುತ್ತಾರೆ ಎಂದು ಟೀಕಿಸಿದರು.
ಅವರು 'I.N.D.I.A' ಒಕ್ಕೂಟ ಮಾಡಿಕೊಂಡಿದ್ದರು. ರಾಹುಲ್ ಗಾಂಧಿಗೆ ಇದರ ಫುಲ್ ಫಾರ್ಮ್ ಚೀಟಿ ಇಲ್ಲದೇ ಹೇಳಲು ಬರಲ್ಲ. ಚೀಟಿ ಇಲ್ಲದೇ ಹೇಳಿ ಅಂತಾ ನಾನೂ ಕೂಡ ಅವರಿಗೆ ಸವಾಲ್ ಹಾಕಿದ್ದೆ. ಕಾಂಗ್ರೆಸ್ ಪಕ್ಷದ ಕಥೆ ಮುಗಿದಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಹಿಮಾಚಲದಲ್ಲಿ ಈಗಾಗಲೇ ಅಲುಗಾಡುತ್ತಿದೆ. ಕಾಂಗ್ರೆಸ್ ಪಕ್ಷ ಕಸ ಇದ್ದಂತೆ. ಕಸ ಇದ್ದಲ್ಲಿ ಬೇರೆ ಬೆಳೆ ಬರುವುದಿಲ್ಲ. ಕಸದಿಂದ ಭೂಮಿ ಬಡವಾಗುತ್ತದೆ. ದೇಶ ಬಡವಾಗುತ್ತದೆ. ಕಸದಂತೆ ಈ ಪಕ್ಷವನ್ನೂ ಕಿತ್ತು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಥಣಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆ - Congress Activists Killed
ಇನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಸೊಸೆ ಕಾಲ್ಗುಣಕ್ಕೆ ಹೋಲಿಸಿ ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದರು. ಕಾಂಗ್ರೆಸ್ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಜನರನ್ನು ಮರುಳು ಮಾಡಿ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿದ್ದಾರೆ. 135 ಸೀಟ್ ಕೊಟ್ಟು ಚೆನ್ನಾಗಿ ಆಡಳಿತ ಮಾಡಿ ಅಂತಾ ಜನ ಆಶೀರ್ವಾದ ಮಾಡಿದ್ದರು. ಆದರೆ, ಇವರಿಗೆ ಅಧಿಕಾರ ಕೊಟ್ಟಾಗಿನಿಂದ ಒಂದು ಹನಿ ಮಳೆಯಾಗಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ಮಳೆಯಾಗಿತ್ತು. ಆದರೆ, ಸಿದ್ದರಾಮಯ್ಯ ಬಂದ ಬಳಿಕ ಒಂದು ಹನಿ ಮಳೆ ಇಲ್ಲ. ಮನೆಗೆ ಬರೋ ಸೊಸೆ ಕಾಲ್ಗುಣ ಚೆನ್ನಾಗಿರಬೇಕು. ಸೊಸೆ ಕಾಲ್ಗುಣ ಕೆಟ್ಟದಾಗಿರಬಾರದು. ಮನೆಗೆ ಬರೋ ಸೊಸೆ ಕಾಲ್ಗುಣ ಯಡಿಯೂರಪ್ಪ ಅವರಂತೆ ಇರಬೇಕು. ಸಿದ್ದರಾಮಯ್ಯರಂತೆ ಇರಬಾರದು. ತಿಂಗಳಿಗೆ 2,000 ರೂ. ಗೃಹಲಕ್ಷ್ಮಿಗೆ ಕೊಟ್ಟಿದ್ದಾರೆ. ಅದು ಒಳ್ಳೆಯ ವಿಚಾರ. ಆದರೆ ಆ ಹಣ ಹೇಗೆ ಬರುತ್ತಿದೆ ಎಂಬುದು ಗೊತ್ತಲ್ವಾ? ಮೂರು ತಿಂಗಳ ಹಣ ಮೊನ್ನೆ ಬಂದಿದೆ. ಕೃಷಿ ಸಮ್ಮಾನ ಯೋಜನೆಗೆ ಬಿಎಸ್‌ವೈ 4,000 ಸೇರಿಸಿದ್ದರು. ಇವರು ಬಂದು ಆ 4,000 ಕಸಿದುಕೊಂಡರು. ಅದರಲ್ಲೇ 2,000ರೂ. ಗೃಹಲಕ್ಷ್ಮಿಗೆ ಕೊಟ್ಟಿದ್ದಾರೆ ಎಂದು ಟೀಕಿಸಿದರು.