ಬೆಂಗಳೂರು: ಕಳೆದ 10 ವರ್ಷಗಳ ಬಿಜೆಪಿ ಆಡಳಿತವನ್ನು ನರೇಂದ್ರ ಮೋದಿಯವರು ಮತ್ತು ಬಿಜೆಪಿಯ ನಾಯಕರು "ಅಮೃತ ಕಾಲ" ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ. ಈ ಅವಧಿಯಲ್ಲಿ ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳು ಐದರಿಂದ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಸಿಎಂ ಸಿದ್ದರಾಮಯ್ಯ ದೂರಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ, ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಈ ದೇಶದ ಮತದಾರರಿಗೆ ನೀಡಿದ್ದ ಒಂದೇ ಒಂದು ಭರವಸೆಯನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಈಡೇರಿಸಿಲ್ಲ. ರೈತರ ಆದಾಯ ದುಪ್ಪಟ್ಟು, ಯುವಜನರಿಗೆ ವಾರ್ಷಿಕ 2 ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಶೋಷಿತ ಸಮುದಾಯಗಳಿಗೆ ರಕ್ಷಣೆ, ಅಗ್ಗದ ದರದಲ್ಲಿ ಅಗತ್ಯವಸ್ತುಗಳ ಪೂರೈಕೆ ಮೊದಲಾದ ಬಣ್ಣಬಣ್ಣದ ಭರವಸೆಗಳನ್ನು ನೀಡಿ ಮೋದಿಯವರು ಚುನಾವಣೆಯಲ್ಲಿ ಗೆದ್ದಿದ್ದರು. ಗೆದ್ದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತು ದೇವರು-ಧರ್ಮದ ಹೆಸರಿನಲ್ಲಿ ಭಾವನಾತ್ಮಕ ರಾಜಕಾರಣ, ಉದ್ಯಮಿಗಳ ತುಷ್ಟೀಕರಣದಲ್ಲಿ ಮುಳುಗಿ ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.