ವಿಜಯಪುರ: "ಪಂಚಮಸಾಲಿಯವರು ಮೀಸಲಾತಿಗಾಗಿ ಹೋರಾಟ ಮಾಡಲು ನಮ್ಮದು ತಕರಾರಿಲ್ಲ. ಆದರೆ ಹೋರಾಟ ಸಂವಿಧಾನಿಕವಾಗಿ ಇರಬೇಕು. ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "2ಡಿ ಮೀಸಲಾತಿ ಕೊಟ್ಟು ಬಳಿಕ ಹೈಕೋರ್ಟ್ಗೆ ಅಫಿಡವಿಟ್ ಹಾಕಿದವರು ಯಾರು? 2023ರಲ್ಲಿ ಅಫಿಡವಿಟ್ ಹಾಕಲಾಗಿದೆ. ಆಗ ಇದೇ ಸ್ವಾಮೀಜಿ ಇದ್ದರು. 3ಬಿಯಲ್ಲಿ ಪಂಚಮಸಾಲಿಗಳಿದ್ದಾರೆ. ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿ ಇವೆ ಗೊತ್ತಾ? ಅದರಲ್ಲಿ ನಾಲ್ಕು ಕಟೆಗೆರಿ ಇವೆ. 1ಎ ನಲ್ಲಿ ಮೋಸ್ಟ್ ಬ್ಯಾಕ್ವರ್ಡ್, 2ಎನಲ್ಲಿ ಕೋರ್ ಬ್ಯಾಕ್ವರ್ಡ್, 3ಎನಲ್ಲಿ ಒಕ್ಲಲಿಗರು, 3ಬಿನಲ್ಲಿ ಲಿಂಗಾಯತರು ಇತರ ಲಿಂಗಾಯತರು ಬರುತ್ತಾರೆ. 2002ರಲ್ಲಿ ಎಸ್.ಎಂ. ಕೃಷ್ಣ ಸಿಎಂ ಇದ್ದಾಗ ಇದೆಲ್ಲ ಆಗಿದೆ" ಎಂದು ತಿಳಿಸಿದರು.
ಆಗ ಏಕೆ ಪ್ರತಿಭಟನೆ ಮಾಡಲಿಲ್ಲ?:"1992ರಲ್ಲಿ ಮೊಯ್ಲಿ ಸಿಎಂ ಇದ್ದಾಗ ಮುಸ್ಲಿಂರಿಗೆ 2ಬಿ ಮಾಡಿದ್ದಾರೆ. ಬಳಿಕ ಬಿಜೆಪಿಯವರು ಮುಸ್ಲಿಂನವರಿಗೆ ಕೊಟ್ಟಿದ್ದನ್ನು ರದ್ದು ಮಾಡಿ 2ಸಿ, 2ಡಿ ಮಾಡಿ ಅದರಲ್ಲಿನ ಶೇ.4ರ ಮೀಸಲಾತಿ ತೆಗೆದು ಇವರಿಗೆ ಕೊಟ್ಟಿದಾರೆ. ಆಗ ಯಾಕೆ ಇವರು ಪ್ರತಿಭಟನೆ ಮಾಡಲಿಲ್ಲ. ಈಗ ಅದೇ ಸರ್ಕಾರದವರು ಇವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಮುಸ್ಲಿಂ ಮೀಸಲಾತಿ ಕಸಿದುಕೊಂಡಿದ್ದನ್ನು ಪ್ರಶ್ನಿಸಿ ರಸೂಲ್ ಎನ್ನುವವರು ಸುಪ್ರೀಂಕೋರ್ಟ್ಗೆ ಹೋಗಿದ್ದರು. ಆಗ ಅಲ್ಲಿ ಇವರ ಪರ ವಕೀಲರು ನಾವು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲ್ಲ ಎಂದು ಹೇಳಿದ್ದರು. ಬಿಜೆಪಿಯವರು ಈಗ ಯಾಕೆ ಬೆಂಬಲ ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದರು.
ಈ ವಿಚಾರವಾಗಿ ಎರಡು ಬಾರಿ ಸಭೆ ಮಾಡಿದ್ದೇನೆ:"ಪಂಚಮಸಾಲಿ ಹೋರಾಟದ ವಿಚಾರವಾಗಿ ನಾನು ಎರಡು ಬಾರಿ ಸಭೆ ಮಾಡಿದ್ದೇನೆ. ಕಾನೂನು ಪ್ರಕಾರ ಹೊಗೋಣ ಎಂದೆ. ಬ್ಯಾಕ್ವರ್ಡ್ ಜೊತೆ ಹೋಗಿ ಎಂದರೂ ಕೇಳಲಿಲ್ಲ. ನಾವು ಚಳವಳಿ ಮಾಡುತ್ತೇವೆ ಎಂದರು, ಮಾಡಿ ಅಂದೆ. ಕೋರ್ಟ್ ಕೂಡ ಶಾಂತಿಯುತವಾಗಿ ಹೋರಾಟ ಮಾಡಿ ಎಂದಿದೆ. ಆದರೆ ಶಾಂತಿಯಿಂದ ಮಾಡುವ ಬದಲು ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ. ನಾನು ಮೂವರು ಸಚಿವರಾದ ಮಹದೇವಪ್ಪ, ಸುಧಾಕರ್ ಹಾಗೂ ವೆಂಕಟೇಶ ಅವರನ್ನು ಕಳುಹಿಸಿದ್ದೆ. ಅವರು ಸಿಎಂ ಜೊತೆ ಮಾತಾಡಲು ಬನ್ನಿ ಎಂದು ಕರೆದರೂ ಇವರು ಬಂದಿಲ್ಲ. ಹಲವಾರು ಗುಂಪುಗಳು ಚಳವಳಿ ಮಾಡುತ್ತವೆ. ಸಿಎಂ ಎಲ್ಲಾ ಕಡೆ ಹೋಗಲು ಆಗುತ್ತಾ?" ಎಂದರು.
ಕಲ್ಲು ಹೊಡೆದಾಗ ತಡೆಯಬೇಕೋ ಬೇಡ್ವೋ?:"ಸಚಿವರು ಕರೆದರೂ ಬರಲ್ಲ ಎಂದು ಸುವರ್ಣ ಸೌಧಕ್ಕೆ ನುಗ್ಗಲು ಪ್ರಯತ್ನಿಸಿದರು. ಕಲ್ಲು ಹೊಡೆದರು. ಆಗ ತಡೆಯಬೇಕು ಅಲ್ವಾ? ಅವರು ಕಲ್ಲು ಹೊಡೆದಿದ್ದು, ನುಗ್ಗಿದ್ದು ನಾನು ಫೋಟೊ ತೋರಿಸುತ್ತೇನೆ. ಕಲ್ಲು ಹೊಡೆಯದಿದ್ದರೆ 20 ಜನ ಪೊಲೀಸರಿಗೆ ಹೇಗೆ ಏಟು ಬಿತ್ತು. ಹೇಗೆ ಗಾಯ ಆಯ್ತು? ಪೊಲೀಸರು ಎಸೆದುಕೊಂಡ್ರಾ? ನಾನು ಹೇಳಿದ್ದಕ್ಕೆ ಸಾಕ್ಷಿ ಇದೆ" ಎಂದು ತಿಳಿಸಿದರು.
ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು:"ಪಂಚಮಸಾಲಿಗಳು ಖಾಯಂ ಬ್ಯಾಕ್ವರ್ಡ್ ಕಮಿಷನ್ ಜೊತೆ ಹೋಗಬೇಕು. ಜಯಪ್ರಕಾಶ ಹೆಗಡೆ ಹೇಳಿದಂತೆ ಹೋಗಬೇಕಿದೆ. ಯಾರೂ ಕೂಡ ಕಾನೂನು ಕೈಗೆ ತೆಗದುಕೊಳ್ಳಬಾರದು. ಕಾಂತರಾಜು ವರದಿಯನ್ನು ಸರ್ಕಾರ ತೆಗೆದುಕೊಂಡಿದೆ. ಕ್ಯಾಬಿನೆಟ್ ಮುಂದೆ ತಂದು ಚರ್ಚೆ ಮಾಡುತ್ತೇವೆ. ಸ್ವಾಮೀಜಿಗಳ ಬಗ್ಗೆ ನಾನು ಮಾತನಾಡಲ್ಲ. ಅದನ್ನು ಜನರು ತೀರ್ಮಾನ ಮಾಡುತ್ತಾರೆ. ಕಾನೂನು ಎಲ್ಲರಿಗೂ ಒಂದೇ"