ದಾವಣಗೆರೆ/ಚಿತ್ರದುರ್ಗ :ಬಿಜೆಪಿ ಮತ್ತು ಆರ್ಎಸ್ಎಸ್ನವರು ಧರ್ಮ, ದೇವರು, ಜಾತಿ ಹೆಸರಲ್ಲಿ ಸಮಾಜ ಒಡೆದು ಛಿದ್ರ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಶೋಷಿತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ರಾಜಕೀಯ ಸಮಾವೇಶ ಅಲ್ಲ, ಇದು ಶೋಷಿತರ ಸಮುದಾಯಗಳ ಒಕ್ಕೂಟದ ಸಮಾವೇಶ. ನಾನು ಈ ಬಗ್ಗೆ ಸ್ಪಷ್ಟೀಕರಿಸಲು ಬಯಸುತ್ತೇನೆ ಎಂದಿದ್ದಾರೆ.
ಶೋಷಿತರು ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದಾರೆ. ದೌರ್ಜನ್ಯ , ಶೋಷಣೆಗೆ ಕಾರಣ ನಮ್ಮ ಜಾತಿ ವ್ಯವಸ್ಥೆ. ತಳ ಸಮುದಾಯಗಳ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಇದು ಅಸಮಾನತೆಗೆ ಕಾರಣವಾಗಿದೆ. ರಾಜಕೀಯ, ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ನಿರಂತರವಾಗಿ ಶೋಷಿತರ ಮೇಲೆ ಈಗಲೂ ಕೂಡಾ ದೌರ್ಜನ್ಯ ನಡೆಯುತ್ತಿದೆ. ಅಂಬೇಡ್ಕರ್ ಅವರು ಸಂವಿಧಾನ ಕೊಟ್ಟು, ಸರ್ವರಿಗೂ ಸಮ ಪಾಲು, ಸಮಬಾಳು ಎಂದಿದ್ದಾರೆ. ಸಮ ಸಮಾಜ ನಿರ್ಮಾಣದ ಕನಸು ಅವರದ್ದು. ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರು ಎಲ್ಲರೂ ಕೂಡಾ ಬದಲಾವಣೆಗಾಗಿ ಪ್ರಯತ್ನ ಮಾಡಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಜಾತಿ ವ್ಯವಸ್ಥೆಯಿಂದ ಶೋಷಣೆಗೆ ಅವಕಾಶ ಆಗಿದೆ. ನಮ್ಮ ಸಂವಿಧಾನ ಇರುವ ಕಾರಣ ದೌರ್ಜನ್ಯ ಕಡಿಮೆ ಆಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಇದನ್ನ ಸಹಿಸುತ್ತಿಲ್ಲ. ಅದಕ್ಕಾಗಿ ಸಂವಿಧಾನ ಬದಲಾವಣೆ ಎನ್ನುತ್ತಿದ್ದಾರೆ. ಅವರಿಗೆ ಸಮಾನತೆ ಬರಬಾರದು ಎಂಬುದಿದೆ. ಸಮ ಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಇಲ್ಲ. ಬುದ್ಧ, ಬಸವ, ಅಂಬೇಡ್ಕರ್ ಕಾಲದಿಂದ ಸಮಾನತೆಗಾಗಿ ಹೋರಾಟ ನಡೆದಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಅಂದರೆ ಯಾರದ್ದೋ ಆಸ್ತಿ, ಯಾರಿಗೋ ಕಿತ್ತು ಕೊಡುವುದಲ್ಲ: ಸಾಮಾಜಿಕ ನ್ಯಾಯ ಅಂದರೆ ಯಾರದ್ದೋ ಆಸ್ತಿಯನ್ನು ಇನ್ಯಾರಿಗೋ ಕಿತ್ತು ಕೊಡುವುದಲ್ಲ. ಸಂಪತ್ತು, ಅಧಿಕಾರ ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು. ಬಿಜೆಪಿಯ ಮಾತೃ ಪಕ್ಷ ಆರ್ಎಸ್ಎಸ್ ವಿರೋಧವಾಗಿದೆ. ಶ್ರೀರಾಮನನ್ನು ರಾಜಕೀಯವಾಗಿ ಬಳಸುವುದನ್ನು ಜನ ವಿರೋಧಿಸುತ್ತಾರೆ. ಮಂಡಲ್ ಆಯೋಗ ಸ್ವೀಕರಿಸಿ ತಂದಿದ್ದು ಅಂದಿನ ಪ್ರಧಾನಿ ವಿ ಪಿ ಸಿಂಗ್, ಮೊದಲಿಂದಲೂ ಕೂಡಾ ಆರ್ಎಸ್ಎಸ್ನವರು ಇದನ್ನ ವಿರೋಧ ಮಾಡುತ್ತಿದ್ದಾರೆ. ಮೀಸಲಾತಿ, ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಿದ್ದಾರೆ. ನನ್ನನ್ನು ಸಹ ಕೆಲವು ಶಕ್ತಿಗಳು ವಿರೋಧಿಸುತ್ತವೆ. ಕುರಿ ಕಾಯುವವನು ಮುಖ್ಯಮಂತ್ರಿ ಆದ ಎಂದು ವಿರೋಧಿಸುತ್ತವೆ. 14 ಬಾರಿ ಬಜೆಟ್ ಮಂಡಿಸಿದ್ದಕ್ಕೆ ವಿರೋಧಿಸುತ್ತವೆ. ನಾನು ಮಾಡಿರುವ ತಪ್ಪೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬಡವರಿಗೆ ಉತ್ತಮ ಯೋಜನೆ ಜಾರಿಗೆ ತಂದಿದ್ದು ತಪ್ಪಾ?. ಐದು ಗ್ಯಾರಂಟಿ ಜಾರಿಗೆ ತಂದಿದ್ದು ಸಿದ್ದರಾಮಯ್ಯ. ಇದಕ್ಕೆ ವಿರೋಧಿಸುತ್ತಾರೆ. ಟೀಕೆ ಮಾಡುತ್ತಾರೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. 21ನೇ ಶತಮಾನಕ್ಕೆ ಬಂದರೂ ಕೂಡಾ ಸಮಾನತೆ ಇನ್ನೂ ಕೂಡಾ ಬಂದಿಲ್ಲ. ದೇವರು ಇಂಥ ಜಾತಿಯವರೇ ಪೂಜಾರಿ ಆಗಿ ಎಂದು ಹೇಳಿಲ್ಲ. ದೇವನೊಬ್ಬ ನಾಮ ಹಲವು ಎಂದರು.
ಧರ್ಮ, ದೇವರು, ಜಾತಿ ಹೆಸರಲ್ಲಿ ಸಮಾಜ ಒಡೆದು ಛಿದ್ರ ಮಾಡಿದ್ದಾರೆ: ಬಿಜೆಪಿ ಆರ್ಎಸ್ಎಸ್ ಧರ್ಮ, ದೇವರು, ಜಾತಿ ಹೆಸರಲ್ಲಿ ಸಮಾಜ ಒಡೆದು ಛಿದ್ರ ಮಾಡಿದ್ದಾರೆ. ದೇವಸ್ಥಾನಕ್ಕೆ ದಲಿತರಿಗೆ ಬರಬೇಡಿ ಎಂದವರು ಯಾರು?. ಕನಕದಾಸರು ಉಡುಪಿ ಕೃಷ್ಣ ದೇವಸ್ಥಾನಕ್ಕೆ ಹೋದಾಗ ಪ್ರವೇಶ ನಿರಾಕರಿಸಿದವರು ಯಾರು?. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಶಿಕ್ಷಣ, ಸಂಘಟನೆ, ಹೋರಾಟ ಎಂದು ಅಂಬೇಡ್ಕರ್ ಹೇಳಿದ್ದಾರೆ. ನ್ಯಾಯ ನಿಮಗೆ ಸಿಗಬೇಕು ಅಂದರೆ ನೀವೆಲ್ಲ ಶಿಕ್ಷಿತರಾಗಬೇಕು ಎಂದು ಶೋಷಿತ ವರ್ಗಕ್ಕೆ ಸಿಎಂ ಕರೆ ನೀಡಿದ್ದಾರೆ.