ಕರ್ನಾಟಕ

karnataka

ETV Bharat / state

ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ, ಸ್ವಯಂಚಾಲಿತ ವಿಂಗಡಣೆ ಘಟಕಗಳನ್ನು ಉದ್ಘಾಟಿಸಿದ ಸಿಎಂ

ಬೆಂಗಳೂರನ್ನು ಸ್ವಚ್ಛ ನಗರವನ್ನಾಗಿಸಲು ಪಾಲಿಕೆಯು ತ್ಯಾಜ್ಯ ನಿರ್ವಹಣೆಗಾಗಿ ಯಾಂತ್ರೀಕೃತ ದೊಡ್ಡ ತ್ಯಾಜ್ಯ ವರ್ಗಾವಣಾ ಕೇಂದ್ರಗಳನ್ನು ನಿರ್ಮಿಸಿದ್ದು, ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

CM Siddaramaiah inaugurates second-stage solid waste transfer and automated sorting units
ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Nov 29, 2024, 8:38 AM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ ವತಿಯಿಂದ ಪಶ್ಚಿಮ ವಲಯದ ಬಿನ್ನಿಮಿಲ್ ರಸ್ತೆಯ ಛಲವಾದಿ ಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಸಿಎಂ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು.

ಈ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಪಾಲಿಕೆ ಆಡಳಿತಗಾರ ಎಸ್.ಆರ್.ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿ‌.ಎಸ್.ಡಬ್ಲ್ಯೂ.ಎಂ.ಎಲ್ ಸಿಇಒ ಡಾ.ಕೆ.ಹರೀಶ್ ಕುಮಾರ್, ವಲಯ ಆಯುಕ್ತೆ ಅರ್ಚನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ, ಒಣ ಮತ್ತು ಗೃಹ ಹಾನಿಕಾರಕ ನೈರ್ಮಲ್ಯ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದ್ದು, ಈ ಕಾರ್ಯವು ಅನೇಕ ಹಂತಗಳನ್ನು ಒಳಗೊಂಡಿದೆ. ಇದರಲ್ಲಿ ಬಂಡವಾಳ ವೆಚ್ಚ ಮತ್ತು ಹೆಚ್ಚಿನ ಮಾನವ ಸಂಪನ್ಮೂಲದಿಂದ ಕೂಡಿದೆ. ಸದ್ಯ ತ್ಯಾಜ್ಯವನ್ನು ಪ್ರಾಥಮಿಕ ಆಟೋ ಟಿಪ್ಪರ್​ಗಳಿಂದ ಕಾಂಪ್ಯಾಕ್ಟರ್ ಬಳಸಿ ರಸ್ತೆ ಬದಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿ ನಿರ್ವಹಿಸಲಾಗುತ್ತಿದೆ. ಸುಧೀರ್ಘವಾಗಿ ಒಂದೇ ಸ್ಥಳದಲ್ಲಿ ತ್ಯಾಜ್ಯ ವರ್ಗಾವಣೆಯನ್ನು ಮಾಡುತ್ತಿರುವುದರಿಂದ ತ್ಯಾಜ್ಯ ಮತ್ತು ಲೀಚೆಟ್ ಸೋರಿಕೆಯಿಂದಾಗಿ ಬ್ಲಾಕ್ ಸ್ಪಾಟ್​ಗಳು ನಿರ್ಮಾಣವಾಗುತ್ತಿದ್ದು, ನಗರದ ಸೌಂದರ್ಯ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ.

ಪಾಲಿಕೆಯ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್​ಗಳನ್ನು ತೆರವುಗೊಳಿಸಿ, ರಸ್ತೆಯಲ್ಲಿ ಸೋರುವ ಲೀಚೆಟ್ ದ್ರವವನ್ನು ತಡೆದು ತ್ಯಾಜ್ಯ ಮುಕ್ತ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡಲು, ನಗರದ ಸೌಂದರ್ಯವನ್ನು ಹೆಚ್ಚಿಸಲು, ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಪಾಲಿಕೆಯು ತ್ಯಾಜ್ಯ ನಿರ್ವಹಣೆಗಾಗಿ ಯಾಂತ್ರೀಕೃತ ದೊಡ್ಡ ತ್ಯಾಜ್ಯ ವರ್ಗಾವಣಾ ಕೇಂದ್ರಗಳನ್ನು ನಿರ್ಮಿಸಿದೆ.

ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಪ್ರತಿನಿತ್ಯ 150ರಿಂದ 200 ಮೆಟ್ರಿಕ್ ಟನ್ ಸಾಮರ್ಥ್ಯದ 3 ಟ್ರಾನ್ಸ್​ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು 40 ಕೋಟಿಗಳ ಮೊತ್ತವನ್ನು ನಿಗಧಿಪಡಿಸಲಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಗುಣಮಟ್ಟವನ್ನು ಕಾಪಾಡಲು ಸಮರ್ಥ ಕಾರ್ಯವಿಧಾನವನ್ನು ಸ್ಥಾಪಿಸುವ ಮೂಲಕ ಹಾಲಿ ಇರುವ ವ್ಯವಸ್ಥೆಯನ್ನು ಉನ್ನತೀಕರಿಸುವ ಯೋಜನೆ ಇದಾಗಿದೆ.

ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ (ETV Bharat)

3 ಟ್ರಾನ್ಸ್​ಫರ್ ಸ್ಟೇಷನ್‌ಗಳನ್ನು ನಿರ್ಮಿಸಿ ನಿರ್ವಹಿಸಲು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಬಿಟಿಎಂ ವಿಭಾಗದ ಈಜೀಪುರದಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರವಹಿಸುತ್ತಿದೆ. ಚಾಮರಾಜಪೇಟೆ ವಿಭಾಗದ ಛಲವಾದಿಪಾಳ್ಯದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಅದರ ಉದ್ಘಾಟನೆಯಾಗಿದೆ. ಇನ್ನು ಸರ್ವಜ್ಞನಗರ ವಿಭಾಗದ ಹೆಚ್‌ಬಿಆರ್ ಬಡಾವಣೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಜನವರಿಗೆ ಕಾರ್ಯಾರಂಭ ಮಾಡಲಿದೆ.

ದ್ವಿತೀಯ ಹಂತದ ದೊಡ್ಡ ಪ್ರಮಾಣದ ಟ್ರಾನ್ಸ್​ಫರ್ ಸ್ಟೇಷನ್‌ಗಳಲ್ಲಿ ಪ್ರತಿನಿತ್ಯ ಸುಮಾರು 150 ರಿಂದ 200 ಮೆಟ್ರಿಕ್ ಟನ್ ತ್ಯಾಜ್ಯವನ್ನು ಪ್ರಾಥಮಿಕ ಸಂಗ್ರಹಣೆಯ ವಾಹನಗಳಿಂದ ದ್ವಿತೀಯ ಹಂತದ ಸಾಗಾಣಿಕೆ ವಾಹನಗಳಿಗೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ಇದರಿಂದ ರಸ್ತೆ ಬದಿಗಳಲ್ಲಿ ಆಗುತ್ತಿದ್ದ ವಾಹನಗಳ ದಟ್ಟಣೆ, ಬ್ಲಾಕ್ ಸ್ಪಾಟ್‌ಗಳ ನಿರ್ಮಾಣ ಹಾಗೂ ಲೀಚೆಟ್ ದ್ರವದ ಸೋರುವಿಕೆಯನ್ನು ತಡೆಗಟ್ಟಿ ನಗರ ಸೌಂದರ್ಯವನ್ನು ಹೆಚ್ಚಿಸಬಹುದಾದೆ.

ತ್ಯಾಜ್ಯ ವಿಲೇವಾರಿಗೆ ಒಂದು ಪ್ರದೇಶವು ಮೀಸಲಾಗಿರುವುದರಿಂದ ಪ್ರಾಥಮಿಕ ಸಂಗ್ರಹಣೆಯ ಸಾಮರ್ಥ್ಯವು ಹೆಚ್ಚಾಗಿ ಇದರಿಂದ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣೆಯ ಕಾರ್ಯವು ಸುಧಾರಿಸಲಿದೆ. ಟ್ರಾನ್ಸ್​ಫರ್ ಸ್ಟೇಷನ್‌ಗಳಲ್ಲಿ ಪ್ರಾಥಮಿಕ ಸಂಗ್ರಹಣಾ ವಾಹನಗಳ ಆರ್‌ಎಫ್‌ಐಡಿ ನೋಂದಣಿಯಾಗಿದ್ದು, ಇದರಿಂದ ವಾಹನಗಳ ತ್ಯಾಜ್ಯದ ಪರಿಮಾಣ ದಾಖಲಾಗಲಿದೆ. ಈ ಎಲ್ಲ ಮಾಹಿತಿಗಳು ಪ್ರತಿನಿತ್ಯ ಕೇಂದ್ರ ಕಛೇರಿಯ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್‌ಗೆ ತಲುಪಲಿದೆ.

ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ಟ್ರಾನ್ಸ್​ಫರ್ ಸ್ಟೇಷನ್‌ಗಳು 2ರಿಂದ 3 ಪಾಳಿಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸಲಿದ್ದಾರೆ. ಇನ್ನು ಅಲ್ಲಿ ದ್ವಿತೀಯ ಹಂತದ ಸಾಗಾಣಿಕ ವಾಹನಗಳಾದ ಕಂಟೈನರ್‌ಗಳು ಲಿಚೆಟ್ ಸೋರಿಕೆಯನ್ನು ತಡೆಗಟ್ಟುವ ತಂತ್ರಜ್ಞಾನವನ್ನು ಹೊಂದಿವೆ. ಇಲ್ಲಿ 20 ಘನ ಮೀಟರ್ ಸಾಮರ್ಥ್ಯದ ಕಂಟೈನರ್‌ಗಳಿದ್ದು ಇದರಿಂದ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯ ತಡೆಗಟ್ಟಲು ಸಹಕಾರಿಯಾಗಲಿದೆ.

ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ:ಘನತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ ತ್ಯಾಜ್ಯ ಉತ್ಪಾದಕರು ತ್ಯಾಜ್ಯವನ್ನು ಮೂಲದಲ್ಲಿಯೇ ಬೇರ್ಪಡಿಸಿ ಪಾಲಿಕೆ ನಿಗಧಿಸಿದ ವಾಹನಗಳಿಗೆ ನೀಡುವುದು ಕಡ್ಡಾಯವಾಗಿದೆ. ತ್ಯಾಜ್ಯ ವಿಂಗಡಣೆಗೆ ವಿವಿಧ ಹಂತಗಳಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರಿಗೆ ಮಾಹಿತಿ ಹಾಗೂ ಅರಿವಿನ ಕಾರ್ಯಕ್ರಮಗಳನ್ನು ಮೂಡಿಸಲಾಗುತ್ತಿದ್ದರೂ ಸಹ ಈವರೆಗೆ ತ್ಯಾಜ್ಯ ವಿಂಗಡಣೆಯಲ್ಲಿ ಶೇ.55ರಷ್ಟು ಪ್ರಗತಿಯನ್ನು ಮಾತ್ರವೇ ಸಾಧ್ಯವಾಗಿದೆ. ವಿಂಗಡಣೆಯಾಗದ ತ್ಯಾಜ್ಯವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಭೂಭರ್ತಿ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಇದರಿಂದ ಭೂಭರ್ತಿ ಪ್ರದೇಶದ ಮೇಲೆ ಹೊರೆಯಾಗುತ್ತಿರುವುದಲ್ಲದೇ ಪರಿಸರದ ಮೇಲೆ ತೀವ್ರ ಪ್ರಮಾಣದ ತೊಂದರೆ ಆಗುತ್ತಿದೆ. ಈ ಕಾರಣಕ್ಕೆ ಸ್ವಯಂ ಚಾಲಿತ ಯಾಂತ್ರೀಕೃತ ತ್ಯಾಜ್ಯ ವಿಂಗಡಣೆ ಯಂತ್ರಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.

ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಯಾಂತ್ರಿಕೃತ ತ್ಯಾಜ್ಯ ವಿಂಗಡಣಾ ಕೇಂದ್ರವನ್ನು ನಿರ್ಮಿಸಲು 12.5 ಕೋಟಿ ಮೊತ್ತವನ್ನು ನೀಡಲಾಗಿತ್ತು. ಅದರಂತೆ ಪ್ರತಿನಿತ್ಯ ಸುಮಾರು 40 ಟನ್ ತ್ಯಾಜ್ಯವು ವಿಂಗಣೆಯಾಗುವ ಸಾಮರ್ಥ್ಯದ 2 ಘಟಕಗಳನ್ನು ನಿರ್ಮಿಸಿ ನಿರ್ವಹಿಸಲಗುತ್ತಿದೆ. ಮೊದಲನೇ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣಾ ಕೇಂದ್ರ ಬಿಟಿಎಂ ವಿಭಾಗದ ಈಜಿಪುರದಲ್ಲಿ ಉದ್ಘಾಟನೆಯಾಗಿದ್ದು, ಪ್ರಸ್ತುತ ಕಾರ್ಯಚರಣೆಯಲ್ಲಿದೆ.

ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕವನ್ನು ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ (ETV Bharat)

ತ್ಯಾಜ್ಯ ವಿಂಗಡಣೆ ಘಟಕಗಳಿಂದ ರಸ್ತೆ ಬದಿಯಲ್ಲಿ ಬ್ಲಾಕ್ ಸ್ಪಾಟ್‌ಗಳು ಕಡಿಮೆಯಾಗಿ ಸಾರ್ವಜನಿಕ ಪ್ರದೇಶಗಳು ಮತ್ತು ರಸ್ತೆಗಳು ಸ್ವಚ್ಛ ಹಾಗೂ ಸುಂದರವಾಗಿ ಕಾಣಲಿದೆ. ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಕೇಂದ್ರಗಳಲ್ಲಿ ತ್ಯಾಜ್ಯದ ಅಂಕಿ ಅಂಶಗಳು ದಾಖಲಾಗಲಿದೆ. ಇದರಿಂದ ತ್ಯಾಜ್ಯ ವಿಂಗಡಣೆಗೆ ಒಂದು ಸ್ಥಳವನ್ನು ನಿಗಧಿಯಾಗಿದ್ದು ಸಾರ್ವಜನಿಕ ಸ್ಥಳಗಳಿಂದ ಶೇಖರಣೆಯಾಗುವ ಮಿಶ್ರ ತ್ಯಾಜ್ಯವನ್ನು ವಿಂಗಡಿಸಬಹುದಾಗಿದೆ.

ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಕೇಂದ್ರಗಳಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸುವುದರಿಂದ ಒಣತ್ಯಾಜ್ಯ ಒಂದೇ ಪ್ರದೇಶದಲ್ಲಿ ಶೇಖರಣೆಯಾಗಲಿದ್ದು, ಇದರಿಂದ ಚಿಂದಿ ಆಯುವವರಿಗೆ ಸಹಾಯವಾಗಲಿದೆ. ಇದರಿಂದ ಯಾಂತ್ರೀಕೃತ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಸಾಧ್ಯವಾಗಲಿದೆ. ತ್ಯಾಜ್ಯದಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ರೋಗಗಳು ಕಡಿಮೆಯಾಗಲಿದೆ. ಭೂಭರ್ತಿ ಪ್ರದೇಶಗಳ ಮೇಲೆ ಒತ್ತಡವನ್ನು ಕಡಿಮೆಗೊಳಿಸಬಹುದಾಗಿದೆ.

ಇದನ್ನೂ ಓದಿ:ದಾವಣಗೆರೆಯಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ: 200 ಟಿಪಿಡಿ ಸಾಮರ್ಥ್ಯದ ಘನತ್ಯಾಜ್ಯ ಸಂಸ್ಕರಣಾ ಘಟಕ ಲೋಕಾರ್ಪಣೆ

ABOUT THE AUTHOR

...view details