ಕರ್ನಾಟಕ

karnataka

By ETV Bharat Karnataka Team

Published : Mar 25, 2024, 5:41 PM IST

Updated : Mar 25, 2024, 10:07 PM IST

ETV Bharat / state

ಮೃಣಾಲ್​ ಜವಾಬ್ದಾರಿ ಸತೀಶ್​ಗೆ, ಪ್ರಿಯಾಂಕಾ ಗೆಲುವಿನ ಹೊಣೆ ಹೆಬ್ಬಾಳ್ಕರ್​ಗೆ; ಸಚಿವರಿಬ್ಬರಿಗೂ ಬಿಗ್​ ಚಾಲೆಂಜ್ - Belgavi Lok Sabha Constituency

ಲೋಕಸಭೆ ಚುನಾವಣೆಗೆ ಬೆಳಗಾವಿ ಕ್ಷೇತ್ರ ಸಿದ್ಧವಾಗಿದೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನೇರ ಫೈಟ್​ ಇದೆ. ಜಿಲ್ಲೆಯ ಇಬ್ಬರು ಸಚಿವರ ಮಕ್ಕಳಿಗೆ ಟಿಕೆಟ್​ ಘೋಷಣೆಯಾಗಿದ್ದು ಈ ಸಚಿವರಿಗೆ ಪ್ರತಿಷ್ಠೆಯ ಕಣವಾಗಿದೆ.

ಜಿದ್ದಿಗೆ ಬಿದ್ದು ಟಿಕೆಟ್ ಕೊಡಿಸಿದ ಸಚಿವರಿಗೆ ಮಕ್ಕಳನ್ನು ಗೆಲ್ಲಿಸೋದೆ ದೊಡ್ಡ ಚಾಲೇಂಜ್..!
ಜಿದ್ದಿಗೆ ಬಿದ್ದು ಟಿಕೆಟ್ ಕೊಡಿಸಿದ ಸಚಿವರಿಗೆ ಮಕ್ಕಳನ್ನು ಗೆಲ್ಲಿಸೋದೆ ದೊಡ್ಡ ಚಾಲೇಂಜ್..!

ಬೆಳಗಾವಿ: ಈ ಬಾರಿ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಚಿವರಿಬ್ಬರ ಮಕ್ಕಳ ಸ್ಪರ್ಧೆಯಿಂದ ಗಮನ ಸೆಳೆದಿದೆ. ಮಕ್ಕಳಿಗೆ ಟಿಕೆಟ್​ ಘೋಷಣೆಯಾಗಿದ್ದು ಅವರನ್ನು ಗೆಲ್ಲಿಸುವುದೇ ಸಚಿವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿಗಳಾಗಿ ಬಿಜೆಪಿಯಿಂದ ಹಿರಿಯ ನಾಯಕರು ಅಖಾಡದಲ್ಲಿರುವುದು.

ಸತೀಶ್​ ಜಾರಕಿಹೊಳಿ

ಎರಡು ತಿಂಗಳ ಹಿಂದೆ ಉಭಯ ಸಚಿವರಿಗೆ ಜವಾಬ್ದಾರಿ: ಸಚಿವ‌ ಸತೀಶ್ ಜಾರಕಿಹೊಳಿ ಪುತ್ರಿಯನ್ನು ಗೆಲ್ಲಿಸುವ ಹೊಣೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೆಗಲಿಗೆ ಇದ್ದರೆ, ಹೆಬ್ಬಾಳ್ಕರ್ ಪುತ್ರನನ್ನು ಗೆಲ್ಲಿಸುವ ಹೊಣೆ ಸತೀಶ್ ಜಾರಕಿಹೊಳಿ ಮೇಲಿದೆ. ಎರಡು ತಿಂಗಳ ಹಿಂದೆಯೇ ಲೋಕಸಭಾ ಕ್ಷೇತ್ರದ ಉಸ್ತುವಾರಿಗಳನ್ನು ಕಾಂಗ್ರೆಸ್ ಹೈಕಮಾಂಡ್ ನೇಮಿಸಿತ್ತು. ಬೆಳಗಾವಿ ‌ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ‌ಕ್ಷೇತ್ರದ ಉಸ್ತುವಾರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ನೇಮಿಸಲಾಗಿತ್ತು.

ಲಕ್ಷ್ಮೀ ಹೆಬ್ಬಾಳ್ಕರ್​

ಹೈಕಮಾಂಡ್ ಆದೇಶದಂತೆ ಚಿಕ್ಕೋಡಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಪ್ರಿಯಾಂಕಾ ಜಾರಕಿಹೊಳಿ ಗೆಲ್ಲಿಸಲು ಲಕ್ಷ್ಮೀ ಹೆಬ್ಬಾಳ್ಕರ್‌ ಶ್ರಮಿಸಬೇಕಿದೆ. ಇನ್ನು ಬೆಳಗಾವಿ ಕ್ಷೇತ್ರದಲ್ಲಿ ಮೃಣಾಲ್‌ ಹೆಬ್ಬಾಳ್ಕರ್ ಗೆಲುವಿಗೆ ಸತೀಶ್ ಜಾರಕಿಹೊಳಿ‌ ಕೆಲಸ ಮಾಡಬೇಕಿದೆ. ಆದರೆ, ಮೃಣಾಲ್‌ ಗೆಲ್ಲಲು ಬಿಜೆಪಿಯಲ್ಲಿ ಇರುವ ಜಾರಕಿಹೊಳಿ ಬ್ರದರ್ಸ್ ಸವಾಲನ್ನು ಎದುರಿಸಬೇಕಿದೆ. ಸಹೋದರರ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹೆಬ್ಬಾಳ್ಕರ್ ಪುತ್ರನನ್ನು ಗೆಲ್ಲಿಸುವಲ್ಲಿ ಸತೀಶ್​ ಯಶಸ್ವಿಯಾಗುತ್ತಾರಾ ಎಂಬ ವಿಚಾರ ಈಗ ತೀವ್ರ ಚರ್ಚೆ ಆಗುತ್ತಿದೆ.

ಪ್ರಿಯಾಂಕ ಜಾರಕಿಹೊಳಿ

ಮತ್ತೊಂದೆಡೆ ಚಿಕ್ಕೋಡಿಯಲ್ಲಿ ಲಿಂಗಾಯತ ನಾಯಕರನ್ನು ಒಗ್ಗೂಡಿಸುವ ಹೊಣೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ವಹಿಸಲಾಗಿದೆ. ಪ್ರಕಾಶ್​ ಹುಕ್ಕೇರಿ, ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರನ್ನು ವಿಶ್ವಾಸಕ್ಕೆ ಪಡೆದ್ರೆ ಮಾತ್ರ ಕೈ ಅಭ್ಯರ್ಥಿ ಪ್ರಿಯಾಂಕಾ ಗೆಲುವು ಸುಲಭವಾಗಲಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್‌ ತಂತ್ರ, ಪ್ರತಿತಂತ್ರ ರೂಪಿಸಬೇಕಿದೆ. ಬೆಳಗಾವಿಯಲ್ಲಿ ಹಿನ್ನಡೆಯಾದ್ರೆ ಚಿಕ್ಕೋಡಿಯಲ್ಲೂ ಕಾಂಗ್ರೆಸ್‌ಗೆ ಒಳ ಏಟು ಆಗಲಿದೆ. ಅಲ್ಲದೇ ಚಿಕ್ಕೋಡಿಯಲ್ಲಿ ಹಿನ್ನಡೆಯಾದ್ರೆ ಬೆಳಗಾವಿಯಲ್ಲೂ ಒಳ ಏಟು ಬೀಳುವ ಸಾಧ್ಯತೆಯಿದೆ. ಹಾಗಾಗಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಎಚ್ಚರಿಕೆಯ ಹೆಜ್ಜೆ ಇಟ್ಟು ತಮ್ಮ ಮಕ್ಕಳನ್ನು ಗೆಲ್ಲಿಸುವ ಅನಿವಾರ್ಯತೆಯಲ್ಲಿದ್ದಾರೆ.

ಮೃಣಾಲ್​ ಹೆಬ್ಬಾಳ್ಕರ್​

ಈ ಬಗ್ಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ನಾನು, ಬೆಳಗಾವಿಗೆ ಸತೀಶ್ ಜಾರಕಿಹೊಳಿ ಉಸ್ತುವಾರಿ ಇದ್ದಾರೆ. ಸಮನ್ವಯತೆಯಿಂದ ಎರಡು ಕಡೆ ಪ್ರಚಾರ ಮಾಡುತ್ತೇವೆ. ಎರಡೂ ಕಡೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಸತೀಶ್​ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ಗೆಲ್ಲಿಸುವ ಮೂಲಕ ಕಮಾಲ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

ಬಿಜೆಪಿಯಿಂದ ಘಟಾನುಘಟಿ ನಾಯಕರಿಗೆ ಟಿಕೆಟ್​: ಚಿಕ್ಕೋಡಿಯಿಂದ ಅಣ್ಣಾಸಾಹೇಬ್ ಜೊಲ್ಲೆ,​ ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಬಿಜೆಪಿ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ಅಣ್ಣಾಸಾಹೇಬ್​ ಜೊಲ್ಲೆ ಅವರು ಸಹ ಕ್ಷೇತ್ರದಲ್ಲಿ ಈಗಾಗಲೇ 2019 ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಒಂದು ಬಾರಿ ಸಂಸದರಾಗಿ ಆಯ್ಕೆ ಆಗಿದ್ದು, ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ. ಅವರ ಪತ್ನಿ ಶಶಿಕಲಾ ಜೊಲ್ಲೆ ಮಾಜಿ ಸಚಿವೆ ಮತ್ತು ಹಾಲಿ ನಿಪ್ಪಾಣಿ ಶಾಸಕಿಯಾಗಿದ್ದು ಕ್ಷೇತ್ರದಲ್ಲಿ ಜನಪ್ರಿಯತೆ ಹೊಂದಿದ್ದಾರೆ. ಇದು ಕೂಡ ಪತಿ ಅಣ್ಣಾಸಾಹೇಬ್​ ಜೊಲ್ಲೆ ಅವರಿಗೆ ಪ್ಲಸ್​ ಪಾಯಿಂಟ್​ ಆಗಲಿದೆ ಎಂಬುದು ರಾಜಕೀಯ ಲೆಕ್ಕಾಚಾರ.

ಅಣ್ಣಾಸಾಹೇಬ್ ಜೊಲ್ಲೆ

ಸಂಸದೆ ಮಂಗಳಾ ಅಂಗಡಿ ಬೆಳಗಾವಿ ಸಂಸದರಾಗಿದ್ದು, ಈ ಸಲದ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪಿದೆ. ಅವರ ಬದಲಿಗೆ ಅವರ ಸಂಬಂಧಿ, ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಅವರಿಗೆ ಮಣೆ ಹಾಕಲಾಗಿದೆ. ಶೆಟ್ಟರ್​ ಕೂಡ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು. ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರ ಸ್ಪರ್ಧೆ ಬೆಳಗಾವಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿಗೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ.

ಜಗದೀಶ್​ ಶೆಟ್ಟರ್​

ಕ್ಷೇತ್ರದ ಪ್ರಭಾವಿ ನಾಯಕರಾದ ಕೆಎಲ್​ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ, ಅಭಯ್​ ಪಾಟೀಲ್​, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ್​ ಪಾಟೀಲ್​ ಅವರ ಮನವೊಲಿಸುವ ಮೂಲಕ ಅವರ ಸಹಕಾರದಿಂದ ಈ ಬಾರಿ ಮತ್ತೊಮ್ಮೆ ಬೆಳಗಾವಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಶೆಟ್ಟರ್​ ಮುಂದಾಗಿದ್ದಾರೆ. ​

ಇಷ್ಟು ದಿನ ಸೈಲೆಂಟ್ ಆಗಿದ್ದ ಶಾಸಕರಾದ ರಮೇಶ್​ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಈಗ ಅಲರ್ಟ್ ಆಗಿದ್ದಾರೆ. ಅರಭಾವಿ ಶಾಸಕ ಬಾಲಚಂದ್ರ, ಗೋಕಾಕ್​ ಶಾಸಕ, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಚುನಾವಣೆ ಘೋಷಣೆ ಆಗುತ್ತಿದ್ದಂತೆ ಅರಭಾವಿಯಲ್ಲಿ ಕಾರ್ಯಕರ್ತರ ಜೊತೆಗೆ ಸಭೆ ಮಾಡಿದ್ದಾರೆ. ರಾಜಕೀಯವಾಗಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಟಕ್ಕರ್​ ಕೊಡಲು ಈ ಉಭಯ ಸಹೋದರರು ಸಜ್ಜಾಗಿದ್ದಾರೆ. ಅಲ್ಲದೆ, ಶೆಟ್ಟರ್​ ಅವರನ್ನು ಗೆಲ್ಲಿಸಲು ತಂತ್ರ ಹೆಣೆಯುತ್ತಿದ್ದಾರೆ.

ಇದನ್ನೂ ಓದಿ:ಲೋಕಸಮರಕ್ಕಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ರಿಂದ ಟೆಂಪಲ್ ರನ್ - DK SHIVAKUMAR TEMPLE RUN

Last Updated : Mar 25, 2024, 10:07 PM IST

ABOUT THE AUTHOR

...view details