ಮಾಜಿ ಸಚಿವ ಸಿ.ಟಿ ರವಿ ಹೇಳಿಕೆ ಮೈಸೂರು:ಒಕ್ಕಲಿಗರಿಗೆ ಒಂದು ಅವಕಾಶ ತಪ್ಪಿದರೆ ಮುಂದೆ ಹತ್ತು ಅವಕಾಶ ಸಿಗುತ್ತದೆ. ಒಕ್ಕಲಿಗರು ರಾಷ್ಟೀಯವಾದಿಗಳು. ರಾಷ್ಟವಾದ ಹಾಗೂ ರಾಷ್ಟ್ರೀಯವಾದಿಗಳಿಗೆ ಅವರ ಮತ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರನ್ನು ರಾಷ್ಟೀಯವಾದಿಗಳಂತೆ ಅಜೆಂಡಾ ಸೆಟ್ ಮಾಡುವುದು ನಾವೇ. ಅದೇ ರೀತಿ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲಾ ಹಿಂದುತ್ವದ ಅಜೆಂಡಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಕಲಬುರಗಿ, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ರಾಷ್ಟ್ರಕ್ಕೆ ಯಾರ ನೇತೃತ್ವ ಬೇಕು, ಪಕ್ಷದ ನೀತಿ, ಕೊಡುಗೆ ಬಗ್ಗೆ ಚರ್ಚೆ ಆಗಬೇಕು. ಅಧಿಕಾರ ಇದ್ದಾಗ ನಡೆಸಿದ ಅಧ್ವಾನ, ಹಗರಣಗಳು ಚರ್ಚೆ ಆಗಬೇಕು. ಸಿಎಂ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ಅನ್ನೋದನ್ನು ಮರೆತಂತೆ ಕಾಣುತ್ತೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕೊಡುಗೆ ಬಗ್ಗೆ ಹೇಳಿ. ರಾಜ್ಯಕ್ಕೆ ಅತೀ ಹೆಚ್ಚು ತೆರಿಗೆ ಪಾಲು ನೀಡಿದವರು ಮೋದಿ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿಟ್ಟಿದ್ದೇವೆ. ಅನ್ಯಾಯ ಮಾಡಿದ್ದಾರೆ ಅನ್ನೋದು ನಿಮ್ಮ ದೃಷ್ಟಿಯಾದರೆ ದೃಷ್ಟಿದೋಷ ನಿವಾರಣೆ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವಿಭಜನೆ ರೋಗ ಆವರಿಸಿದೆ. ಸ್ವಾತಂತ್ರ್ಯಕ್ಕೂ ಮುನ್ನ ತ್ರಿಪಕ್ಷ ಒಪ್ಪಂದಕ್ಕೆ ಕಾಂಗ್ರೆಸ್, ಬ್ರಿಟಿಷ್ ಹಾಗೂ ಮುಸ್ಲಿಮರು ಭಾರತ ವಿಭಜನೆ ಮಾಡಿದ್ದರು. ಆ ವಿಭಜನೆ ರೋಗ ಇಂದಿಗೂ ಕಮ್ಮಿ ಆಗಲಿಲ್ಲ. ರೋಗ ಆವರಿಸಿದೆ. ಕಾಂಗ್ರೆಸ್ ತನ್ನ ಸ್ಥಾಪನೆಯಿಂದ ಈವರೆಗೂ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಂಡು ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಉದ್ದೇಶ ಕಾಂಗ್ರೆಸ್ ಪಕ್ಷದ್ದಾಗಿರಲಿಲ್ಲ. ಸತತ ಸೋಲುಗಳ ನಂತರವೂ ರಾಹುಲ್ ಗಾಂಧಿ ಅವರನ್ನು ಬಿಂಬಿಸುವ ಕೆಲಸ ಕಡಿಮೆ ಆಗಿಲ್ಲ. ಈ ಚುನಾವಣೆ ಬಳಿಕ ದೇಶದ ಜನರೇ ರಾಹುಲ್ ಗಾಂಧಿಗೆ ನಿವೃತ್ತಿ ನೀಡಲಿದ್ದಾರೆ ಎಂದು ಟೀಕಿಸಿದರು.
ಮೈಸೂರು ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಟಿಕೆಟ್ ಕೊಟ್ಟಿದ್ದೇವೆ ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಸಿ.ಟಿ.ರವಿ, ಯಾರನ್ನೋ ಕರೆದುಕೊಂಡು ಬಂದು ಇವನು ಒಕ್ಕಲಿಗ ಅಂದರೆ ಹೇಗೆ?. ಸಂಸ್ಕಾರ ಇಲ್ಲದವರನ್ನು ಒಕ್ಕಲಿಗರು ನಾಯಕ ಅಂತಾ ಒಪ್ಪಿಕೊಳ್ಳಲ್ಲ ಎಂದರು.
ಈಶ್ವರಪ್ಪ ವಿಚಾರಕ್ಕೆ ನೋ ಕಮೆಂಟ್ಸ್: ಈಶ್ವರಪ್ಪ ಹೆಸರು ಹೇಳುತ್ತಿದ್ದಂತೆ ನೋ ಕಮೆಂಟ್ಸ್ ಎಂದ ಸಿ.ಟಿ ರವಿ, ಮೋದಿ ಪೋಟೋ ಬಳಕೆ ಬಗ್ಗೆಯೂ ಯಾವುದೇ ಹೇಳಿಕೆ ನೀಡಲಿಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ ಇದೆ. ಅದಕ್ಕಾಗಿ ನಮ್ಮ ಹೆಸರನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದಾರೆ. ನಾನು ಅವರ ಜತೆ ಮಾತನಾಡಿದ್ದೇನೆ. ಪಕ್ಷದಲ್ಲೇ ಇರಿ ಅಂತ ಹೇಳಿದ್ದೇನೆ. ಮತ್ತೊಮ್ಮೆ ಮೋದಿಗಾಗಿ, ಬಿಜೆಪಿಗಾಗಿ ಪಕ್ಷ ಮೀರಿದ ಕೆಲಸ ಮಾಡಬೇಡಿ ಅಂತ ಮನವಿ ಮಾಡಿದ್ದೇನೆ ಎಂದರು.
ಇದನ್ನೂ ಓದಿ:ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ - Fakir Dingaleshwara Swamiji