ಚಿಕ್ಕಮಗಳೂರು :ರಸ್ತೆಯಲ್ಲಿ ಮಂಜಿನ ಮಧ್ಯೆ ನಿಂತಿದ್ದ ಆನೆ ಕಂಡು ಹೆದರಿದ ಬೊಲೆರೊ ವಾಹನ ಸವಾರರೊಬ್ಬರು ಪ್ರಪಾತಕ್ಕೆ ವಾಹನ ಇಳಿಸಿದ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಆನೆ ಕಾಡಿನತ್ತ ತೆರಳಿದ ಬಳಿಕ ವಾಹನ ಸಂಚಾರ ಸುಗಮವಾಗಿದೆ. ಚಾರ್ಮಾಡಿ ಘಾಟಿಯ 8-9ನೇ ತಿರುವಿನ ಮಧ್ಯೆ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಮಂಜು ಆವರಿಸಿದ್ದ ಹಿನ್ನೆಲೆ ಆನೆ ಹತ್ತಿರ ಬರುತ್ತಿರುವಂತೆ ಕಾಣಿಸಿದ್ದರಿಂದ ವಾಹನ ಸವಾರ ಭಯಗೊಂಡಿದ್ದಾರೆ.
ಚಿಕ್ಕಮಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿಯಲ್ಲಿ ಕಳೆದ 15 ದಿನಗಳಿಂದ ಆನೆ ಸಂಚಾರ ನಿರಂತರವಾಗಿ ಕಂಡುಬರುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಜರುಗಿಸದೇ ಆನೆಯನ್ನು ಕೂಡ ಬೇರೆ ಕಡೆ ಸ್ಥಳಾಂತರ ಮಾಡದೇ ಇಲ್ಲಿಗೆ ಬಿಟ್ಟಿದ್ದಾರೆ. ಇದರಿಂದ ನಿತ್ಯ ರಸ್ತೆಯಲ್ಲಿ ಸಂಚಾರ ಮಾಡುವ ಸವಾರರಿಗೆ ಕಿರಿಕಿರಿಯಾಗುತ್ತಿದ್ದು, ಕೂಡಲೇ ಈ ಸಮಸ್ಯೆಗೆ ಸರಿಯಾದ ಕ್ರಮ ಜರುಗಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಭಾಗದಲ್ಲಿ ಮುಂಜಾನೆ ಹಾಗೂ ಸಂಜೆ ವೇಳೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಏಕಾಏಕಿ ಚಾರ್ಮಾಡಿ ರಸ್ತೆ ಮಧ್ಯೆ ಕಾಡಾನೆ ನಿಂತಿದ್ದನ್ನು ಕಂಡು ವಾಹನ ಸವಾರರು ಆತಂಕಕ್ಕೆ ಒಳಗಾಗುತ್ತಿದ್ದಾರೆ.