ಬೆಂಗಳೂರು:ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25 ನೇ ಸಾಲಿನ ಆಯವ್ಯಯ ಮಂಡಿಸುತ್ತಿದ್ದರೆ, ಅತ್ತ ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯರು ಬಜೆಟ್ ಬರೀ ಓಳು ಎಂದು ಬಿತ್ತಿ ಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಸದನ ಮುಂದೂಡಿಕೆಯಾಗುತ್ತಿದ್ದಂತೆ ಬಜೆಟ್ ವಿರೋಧಿಸಿ ಬಿಜೆಪಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು.
ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾನಾಯಕ ಬೋಸರಾಜ್, ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಮಂಡಿಸಿದ ಪ್ರಸಕ್ತ ವರ್ಷದ ಆರ್ಥಿಕ ಮುಂಗಡ ಬಜೆಟ್ ಅನ್ನು ಪರಿಷತ್ನಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಬ್ಯಾಗ್ ನಿಮಗೆ ಮಾತ್ರವೇ, ನಮಗಿಲ್ಲವೇ, ಕಾಂಗ್ರೆಸ್ಗೆ ಮಾತ್ರ ಬ್ಯಾಗ್ನಲ್ಲಿ ಬಜೆಟ್ ಪ್ರತಿಯೇ ಎಂದು ಕಾಲೆಳೆದರು.
ನಂತರ ಮಾತನಾಡಲು ಪ್ರತಿಪಕ್ಷ ಸಚೇತಕ ರವಿಕುಮಾರ್ ಮುಂದಾಗುತ್ತಿದ್ದಂತೆ, ಅವಕಾಶ ನಿರಾಕರಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದರು. ಸದನ ಮುಂದೂಡಿಕೆ ಬಳಿಕ ಸದನದಲ್ಲಿ, ಬಜೆಟ್ ಸುಳ್ಳಿನ ಕಂತೆ ಎಂದು ಬಿಜೆಪಿ ಸದಸ್ಯರು ಘೋಷಣೆ ಕೂಗಿದರು.