ಕರ್ನಾಟಕ

karnataka

ETV Bharat / state

ನವೆಂಬರ್‌ 30 ರಿಂದ ಡಿಸೆಂಬರ್ 15ರವರೆಗೆ "ಬೆಂಗಳೂರು ಹಬ್ಬದ" ಆಚರಣೆ

ಅನ್‌ಬಾಕ್ಸಿಂಗ್‌ ಬೆಂಗಳೂರು ಹಬ್ಬದ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಅನಾವರಣಗೊಳಿಸಿದರು.

Bengaluru Habba
ಬೆಂಗಳೂರು ಹಬ್ಬ (ETV Bharat)

By ETV Bharat Karnataka Team

Published : 6 hours ago

ಬೆಂಗಳೂರು: ಇದೇ ನವೆಂಬರ್‌ 30ರಿಂದ ಡಿಸೆಂಬರ್ 15ರ ವರೆಗೆ ಬೆಂಗಳೂರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಶ್ರೀಮಂತ ಕಲೆ, ಸಾಹಿತ್ಯ ಸಂಸ್ಕೃತಿ ಪ್ರತಿಬಿಂಬಿಸಲು ಅನ್‌ಬಾಕ್ಸಿಂಗ್‌ ಬೆಂಗಳೂರು ಫೌಂಡೇಷನ್‌, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಬೆಂಗಳೂರು ಹಬ್ಬದ ಎರಡನೇ ಆವೃತ್ತಿಯನ್ನು ಅದ್ಧೂರಿಯಿಂದ ಆಚರಿಸಲು ಸಜ್ಜಾಗಿದೆ.

ನವೆಂಬರ್‌ 30ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿರುವ ಬೆಂಗಳೂರು ಹಬ್ಬ 16 ದಿನಗಳ ಕಾಲ ನಡೆಯಲಿದ್ದು, ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ವಿವಿಧ ರೀತಿಯ ಮಳಿಗೆಗಳ ಆಯೋಜನೆ ಸೇರಿದಂತೆ ಸಾರ್ವಜನಿಕರನ್ನು ಮನಸೂರೆಗೊಳಿಸುವ 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಗರದ 40ಕ್ಕೂ ಹೆಚ್ಚು ಸ್ಥಳದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು ಹಬ್ಬ (ETV Bharat)

ಪ್ರಮುಖವಾಗಿ ನಗರದ ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್, ಮಲ್ಲೇಶ್ವರದ ಪಂಚವಟಿ, ಕಾಮರಾಜ್ ರಸ್ತೆಯ ಸಭಾ ಮತ್ತು ಹಲವು ಜನಪ್ರಿಯ ಸ್ಥಳಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಅನ್‌ಬಾಕ್ಸಿಂಗ್‌ ಬೆಂಗಳೂರು ಹಬ್ಬದ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರು ಅನಾವರಣಗೊಳಿಸಿದರು.

ಬೆಂಗಳೂರು ಹಬ್ಬ (ETV Bharat)

ಕಾರ್ಯಕ್ರಮಗಳ ವಿವರ:ನವೆಂಬರ್‌ 30 ರಿಂದ ಪ್ರತಿದಿನ 10ಕ್ಕೂ ಅಧಿಕ ಕಾರ್ಯಕ್ರಮಗಳು ವಿವಿಧ ಸ್ಥಳಗಳಲ್ಲಿ ನಡೆಯಲಿವೆ. ಗೋಡೆ ಚಿತ್ರ, ಕಲಾ ಪ್ರದರ್ಶನ, ಬೆಂಗಳೂರು ಸಮಸ್ಯೆ ಬಗೆಹರಿಸುವ ಬೆಂಗಳೂರು ಚಾಲೆಂಜ್‌, 38 ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಬೃಹತ್‌ ಜಾನಪದ ಸಂಗೀತ ಕಾರ್ಯಕ್ರಮ, ಬೊಂಬೆಯಾಟ, ನಾಟಕ ಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು https://blrhubba.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದ್ದು, ಈ ವೆಬ್‌ಸೈಟ್‌ ಮೂಲಕವೇ ಹಾಜರಾತಿಯನ್ನು ಸಹ ಕಾಯ್ದಿರಿಸಬಹುದಾಗಿದೆ. ನೇರವಾಗಿಯೂ ಸಹ ಕಾರ್ಯಕ್ರಮಕ್ಕೆ ತೆರಳಬಹುದಾಗಿದೆ. ಬಹುತೇಕ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶವಿರಲಿದ್ದು, ನೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರು ಹಬ್ಬದ ಅನುಭವ ಪಡೆಯಬಹುದಾಗಿದೆ.

ಕುವೆಂಪು ಅವರ 120ನೇ ಜನ್ಮದಿನೋತ್ಸವ ಆಚರಣೆ:ಬೆಂಗಳೂರು ಹಬ್ಬದ ಮತ್ತೊಂದು ವಿಶೇಷವೆಂದರೆ, ಸಾಹಿತ್ಯ ಲೋಕದ ದಿಗ್ಗಜ ಕವಿ ಕುವೆಂಪು ಅವರ 120ನೇ ಜನ್ಮ ವಾರ್ಷಿಕೋತ್ಸವದ ಭಾಗವಾಗಿ "ಗಲಗಲ ಗದ್ದಲ" ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ವೇಳೆ ಪ್ರಸಿದ್ಧ ಸಾಹಿತಿಗಳು ಭಾಗವಹಿಸಲಿದ್ದಾರೆ.

ಬೆಂಗಳೂರು ಹಬ್ಬದ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, "ಈ ಹಬ್ಬವು ನಮ್ಮ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಸೃಜನಶೀಲತೆಯ ಸಾರವನ್ನು ಒಟ್ಟುಗೂಡಿಸಲು ನಡೆಸುತ್ತಿರುವ ಪ್ರಮುಖ ಆಚರಣೆಯಾಗಿದೆ. ಈ ಕಾರ್ಯಕ್ರಮವು ಕರ್ನಾಟಕಕ್ಕೆ ತನ್ನ ಪರಂಪರೆ, ಕಲೆ ಮತ್ತು ನಾವೀನ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ಒಂದು ಅನನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ" ಎಂದರು.

ಬೆಂಗಳೂರು ಹಬ್ಬ ಮುಖ್ಯ ಸಂಚಾಲಕ ವಿ. ರವಿಚಂದರ್ ಮಾತನಾಡಿ, "ಬಿಎಲ್‌ಆರ್ ಹಬ್ಬವು ನಗರದ ಸಂಸ್ಕೃತಿ, ಸೃಜನಶೀಲತೆ ಮತ್ತು ಸಮುದಾಯದ ಪ್ರಜ್ಞೆಯ ಆಚರಣೆಯಾಗಿದೆ. ಈ ಹಬ್ಬವು ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸಿ, ಕಲೆ, ಸಂಪ್ರದಾಯ ಮತ್ತು ನಾವೀನ್ಯತೆಯಲ್ಲಿ ಬೆಂಗಳೂರಿನ ವೈಶಿಷ್ಟ್ಯವನ್ನು ಜಗತ್ತಿಗೆ ಸಾರಲಿದೆ. ಹೀಗಾಗಿ ಪ್ರತಿಯೊಬ್ಬರು ನಮ್ಮೂರ ಹಬ್ಬದಲ್ಲಿ ಭಾಗವಹಿಸಬೇಕು" ಎಂದು ಆಹ್ವಾನಿಸಿದರು.

ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ನ ಸಿಇಒ ಮತ್ತು ಸಹ- ಸಂಸ್ಥಾಪಕಿ ಮಾಲಿನಿ ಗೋಯಲ್ ಮಾತನಾಡಿ, "ಬಿಎಲ್‌ಆರ್ ಹಬ್ಬ ಬೆಂಗಳೂರಿನ ನಿಜವಾದ ಸಾರವನ್ನು, ಅದರ ವೈವಿಧ್ಯತೆ, ಸೃಜನಶೀಲತೆಯನ್ನು ಆಚರಿಸುವ ಆಂದೋಲನವಾಗಿದೆ. ನಮ್ಮ ನಗರ ಕೇವಲ ಉದ್ಯೋಗಕ್ಕಷ್ಟೇ ಸೀಮಿತವಾಗದೇ ಇಲ್ಲಿನ ವಿಶಿಷ್ಟ ಸಂಸ್ಕೃತಿ, ಕಲೆಯನ್ನು ಉಳಿಸುವುದು ನಮ್ಮ ಧ್ಯೇಯವಾಗಿದೆ. ಈ ಹಬ್ಬವನ್ನು ಗೋ ನೇಟಿವ್, ಝೆರೋಧಾ, ಮಣಿಪಾಲ್ ಫೌಂಡೇಶನ್ ಮತ್ತು ಪ್ರೆಸ್ಟೀಜ್ ಗ್ರೂಪ್ ಇತರರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ:ಬೆಂಗಳೂರು ಟೆಕ್ ಶೃಂಗಸಭೆ: ನಿಬ್ಬೆರಗುಗೊಳಿಸಿದ ಫ್ಲೈಯಿಂಗ್​ ಮ್ಯಾನ್ ಪ್ರದರ್ಶನ

ABOUT THE AUTHOR

...view details