ಗದಗ: ''ಹುಬ್ಬಳ್ಳಿ ಅಂಜಲಿ ಕೊಲೆ ಪ್ರಕರಣಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ'' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರೋಪಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ''ನೇಹಾ ರೀತಿಯಲ್ಲೇ ನಿನ್ನನ್ನೂ ಕೊಲೆ ಮಾಡುವುದಾಗಿ ಯುವತಿಗೆ ಮೊದಲೇ ಆರೋಪಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ಕೂಡ ಕೊಟ್ಟಿದ್ದರು. ಆದರೆ ಈ ಬಗ್ಗೆ ಪೊಲೀಸರು ಉದಾಸೀನ ತೋರಿಸಿದ್ದಾರೆ. ಪೊಲೀಸರು ಆರೋಪಿಯನ್ನು ಮೊದಲೇ ಬಂಧಿಸಿದ್ದರೆ ಕೊಲೆ ನಡೆಯುತ್ತಿರಲಿಲ್ಲ. ಈ ಪ್ರಕರಣದಲ್ಲಿ ಪೊಲೀಸರ ಪಾತ್ರ ದೊಡ್ಡದಿದೆ. ಪೊಲೀಸರು ಈ ಕೊಲೆಗೆ ಪರೋಕ್ಷವಾಗಿ ಕಾರಣರಾಗಿದ್ದಾರೆ'' ಎಂದು ಹೇಳಿದರು.
"ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಪೊಲೀಸರನ್ನು ಕೇವಲ ರಾಜಕೀಯ ವಿರೋಧಿಗಳ ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆ ಬಳಿಕ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ಹಾಕೋದ್ರಲ್ಲಿ ಪೊಲೀಸರು ನಿರತರಾಗಿದ್ದಾರೆ. ಸಂಪೂರ್ಣ ಅವ್ಯವಹಾರ, ದಂಧೆಯಲ್ಲಿ ತೊಡಗಿದ್ದಾರೆ. ಇಸ್ಪೀಟ್, ಮಟ್ಕಾ, ಕ್ಲಬ್‌ಗಳು, ಮರಳು ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ದೊಡ್ಡ ಲಂಚ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಇಡr ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾನೂನು ಸುವ್ಯವಸ್ಥೆ ಹದಗೆಡಲು ಸರ್ಕಾರದ ವ್ಯವಸ್ಥೆಯೇ ಕಾರಣ" ಎಂದು ಟೀಕಿಸಿದರು.