ಹೊಸಕೋಟೆ(ಬೆಂಗಳೂರು ಗ್ರಾಮಾಂತರ): 46 ಪ್ರಕರಣಗಳಲ್ಲಿ ಭಾಗಿಯಾಗಿ, 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಸರ್ದಾರ್ ಅಲಿಯಾಸ್ ಸೈಯದ್ ಜಮಾಲ್ ಮತ್ತು ಸುಹೇಲ್ ಅಲಿಯಾಸ್ ಲಲ್ಲು ಬಂಧಿತರು.
ತಲೆಮರೆಸಿಕೊಂಡಾಗ ಸರ್ದಾರ್ಗೆ 25 ವರ್ಷ ವಯಸ್ಸಾಗಿದ್ದು, ಈಗ 50 ವರ್ಷ ವಯಸ್ಸಾಗಿದೆ. ಈತ ಬೆಂಗಳೂರಿನ ದೇವನಜೀವನಹಳ್ಳಿ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಸುಹೇಲ್ ತಲೆಮರೆಸಿಕೊಂಡಾಗ 26 ವರ್ಷ ವಯಸ್ಸಾಗಿದ್ದು, ಈಗ 51 ವರ್ಷ ವಯಸ್ಸಾಗಿದೆ. ಈತ ಬೆಂಗಳೂರಿನ ಬನಶಂಕರಿಯ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ.
ಬಂಧಿತರ ವಿರುದ್ಧ ತಿರುಮಲಶೆಟ್ಟಿಹಳ್ಳಿ ಠಾಣೆಯಲ್ಲಿ 5, ಅನುಗೊಂಡನಹಳ್ಳಿ ಠಾಣೆಯಲ್ಲಿ 5, ಹೊಸಕೋಟೆ ಠಾಣೆಯಲ್ಲಿ 5, ನಂದಗುಡಿ ಠಾಣೆಯಲ್ಲಿ 7, ಸರ್ಜಾಪುರ ಠಾಣೆಯಲ್ಲಿ 1, ವರ್ತೂರು ಠಾಣೆಯಲ್ಲಿ 1, ಕೆಂಗೇರಿ ಠಾಣೆಯಲ್ಲಿ 1, ಜ್ಞಾನಭಾರತಿ ಠಾಣೆಯಲ್ಲಿ 1 ಮತ್ತು ಕೋಲಾರ ಜಿಲ್ಲೆಯ ಮಾಲೂರು ಠಾಣೆಯಲ್ಲಿ 20 ಪ್ರಕರಣಗಳು ದಾಖಲಾಗಿವೆ.
ಆರೋಪಿಗಳ ಪತ್ತೆಗಾಗಿ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಂದರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಈ ವಿಶೇಷ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:ಕಾಮಾಕ್ಷಿಪಾಳ್ಯ ಹಿಟ್ ಅಂಡ್ ರನ್ ಪ್ರಕರಣ: ಕಾರು ಚಾಲಕನ ಬಂಧನ