ಸಿಸಿಬಿ ಪೊಲೀಸರ ಮೇಲೆ ಆಫ್ರಿಕನ್ ಪ್ರಜೆಗಳಿಂದ ಹಲ್ಲೆ ಬೆಂಗಳೂರು: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಆಫ್ರಿಕಾದ ಪ್ರಜೆಗಳು ಹಲ್ಲೆಗೈದ ಘಟನೆ ತಡರಾತ್ರಿ ಬೆಂಗಳೂರು ಗ್ರಾಮಾಂತರದ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ನಡೆದಿದೆ. ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಐದಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ.
ಮಾವಳ್ಳಿಪುರದ ಮನೆಯೊಂದರಲ್ಲಿ ಮಾದಕ ವಸ್ತುಗಳ ಸೇವನೆ, ಸಂಗ್ರಹಣೆಯ ಕುರಿತು ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರ ತಂಡ, ತಡರಾತ್ರಿ ಕಾರ್ಯಾಚರಣೆಗೆ ತೆರಳಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಮುಂದಾದ ಆರೋಪಿಗಳ ಗುಂಪು ಕಬ್ಬಿಣದ ರಾಡು, ಕಲ್ಲು, ಹೆಲ್ಮೆಟ್ಗಳಿಂದ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದೆ.
ತಕ್ಷಣ ಸಿಸಿಬಿ ಪೊಲೀಸ್ ಸಿಬ್ಬಂದಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ರಾಜಾನುಕುಂಟೆ ಠಾಣೆಯ ಹೊಯ್ಸಳ ಸಿಬ್ಬಂದಿ ಮೇಲೂ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಸಿಬಿ ಘಟಕದ ಜೀಪ್ ಮತ್ತು ರಾಜಾನುಕುಂಟೆ ಪೊಲೀಸ್ ಠಾಣೆಯ ಹೊಯ್ಸಳ ಜೀಪಿನ ಗಾಜುಗಳು ಜಖಂಗೊಂಡಿವೆ.
ಗಾಯಗೊಂಡ ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಮಕ್ಕಳ ಆಶ್ಲೀಲ ವಿಡಿಯೋ ಶೇರ್ ಮಾಡುತ್ತಿದ್ದ ಆರೋಪಿ ಅರೆಸ್ಟ್ - Accused Arrest
ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಮಾದಕ ಪದಾರ್ಥಗಳಸಹಿತ ಓರ್ವ ವಿದೇಶಿ ಪ್ರಜೆಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ಮಾಹಿತಿಯ ಮೇರೆಗೆ ಮತ್ತೋರ್ವ ಮಾದಕ ಸರಬರಾಜುಗಾರನ ಬಂಧನಕ್ಕೆಂದು ಯಲಹಂಕದ ಪ್ರಕೃತಿ ಲೇಔಟ್ ಬಳಿ ತೆರಳಿದ್ದರು. ಆರೋಪಿ ಸಿಗದಿದ್ದಾಗ ಆತ ಇದ್ದ ಸ್ಥಳದ ಮಾಹಿತಿ ಕಲೆಹಾಕಿ ಹಿಂಬಾಲಿಸಿ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಜೊತೆಗಿದ್ದ ಮತ್ತೋರ್ವ ಆರೋಪಿ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ವಾಯ್ಸ್ ಮೆಸೇಜ್ ಕಳಿಸಿ ಇತರೆ ಆರೋಪಿಗಳನ್ನು ಕರೆಸಿಕೊಂಡಿದ್ದಾನೆ. 'ನಾವು ಸಿಸಿಬಿ ಪೊಲೀಸರು' ಎಂದು ಹೇಳಿದರೂ ಸಹ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಸಿಸಿಬಿ ಸಿಬ್ಬಂದಿ ಪೊಲೀಸ್ ಸಹಾಯವಾಣಿಗೆ ನೀಡಿದ ಮಾಹಿತಿಯನ್ವಯ ರಾಜಾನುಕುಂಟೆ ಠಾಣಾ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಆದರೆ ಅವರ ಮೇಲೂ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ವಿಭಾಗದ ಡಿಸಿಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಘಟನೆಯಲ್ಲಿ ಸಿಸಿಬಿ ಸಿಬ್ಬಂದಿ, ರಾಜಾನುಕುಂಟೆ ಠಾಣಾ ಸಿಬ್ಬಂದಿ ಸಹಿತ ನಾಲ್ವರಿಗೆ ಗಾಯಗಳಾಗಿವೆ. ಸಿಸಿಬಿ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಸ್ವಾಮಿ ನೀಡಿರುವ ದೂರಿನನ್ವಯ ರಾಜಾನುಕುಂಟೆ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳು ವಾಸವಿದ್ದ ಮನೆಯನ್ನು ಉತ್ತರ ಭಾರತ ಮೂಲದ ಮಹೇಶ್ ಗುಪ್ತಾ ಎಂಬಾತ ಮನೆ ಬಾಡಿಗೆಗೆ ನೀಡಿದ್ದ. ಆತ ಬಿಹಾರದಲ್ಲಿದ್ದು, ಆತನನ್ನೂ ಸಹ ಸಂಪರ್ಕಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದೇವೆ. ಆರೋಪಿಗಳ ಬಂಧನದ ಬಳಿಕ ಅವರು ಯಾವ ವೀಸಾದಡಿ ಭಾರತಕ್ಕೆ ಬಂದಿದ್ದರು? ಅವಧಿ ಅಂತ್ಯವಾದ ಬಳಿಕವೂ ವಾಸವಿದ್ದರಾ? ವಿದೇಶಿಯರ ಪ್ರಾದೇಶಿಕ ನೋಂದಣಿ ಕೇಂದ್ರ (FRRO) ದಲ್ಲಿ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿವುದು. ಹೆಚ್ಚಿನ ಸಿಬ್ಬಂದಿಯೊಂದಿಗೆ ತೆರಳಿ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಇದನ್ನೂ ಓದಿ:ಬೆಂಗಳೂರು: ಚೀಟಿ ಹೆಸರಿನಲ್ಲಿ ಚೀಟಿಂಗ್ ಆರೋಪ, ದಂಪತಿ ಬಂಧನ - Fraud Case