ದಾವಣಗೆರೆ :ರೈತರಿಂದ ಹಾಗೂ ದಲ್ಲಾಳಿಗಳಿಂದ ಮೆಕ್ಕೆಜೋಳ ಮತ್ತು ಭತ್ತ ಖರೀದಿ ಮಾಡಿ ಅವರಿಗೆ ಹಣ ನೀಡಿಲ್ಲ ಎಂದು ಆರೋಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನ ನಗರದ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಶ್ರೀನಿವಾಸ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭತ್ತ ಖರೀದಿ ಮಾಡಿ ಹಣ ನೀಡದೇ ಸತಾಯಿಸಿದ್ದ ಎಂದು ಆಂಧ್ರಪ್ರದೇಶದ ನಂದಿಹಾಲ ಜಿಲ್ಲೆಯ ಕಂಪಮಲ್ಲಾ ಗ್ರಾಮದ ನಿವಾಸಿ ಎಂ. ನರಸಯ್ಯ ಎಂಬುವವರು ಶ್ರೀನಿವಾಸ್ ಎನ್ನುವವರ ವಿರುದ್ಧ ದೂರು ದಾಖಲು ಮಾಡಿದ್ದರು.
ಎಸ್ಪಿ ಉಮಾಪ್ರಶಾಂತ್ ಮಾತನಾಡಿದ್ದಾರೆ (ETV Bharat) ಪ್ರಕರಣ ಕುರಿತು ಮಾಹಿತಿ : ಆಂಧ್ರಪ್ರದೇಶ ಮೂಲದ ನರಸಯ್ಯ ಅವರು ಭತ್ತ ಮಾರಾಟ ಮಾಡುವ ಕೆಲಸ ಮಾಡ್ತಿದ್ದರು. ಈ ಹಿಂದೆ ದಾವಣಗೆರೆಯ ನಿವಾಸಿ ಶ್ರೀನಿವಾಸ್ ಎಂಬುವವರು ನರಸಯ್ಯ ಅವರಿಗೆ ಕರೆಮಾಡಿ ನಿಮ್ಮ ಲಾರಿಯ ಡ್ರೈವರ್ ಬಳಿ ನಿಮ್ಮ ನಂಬರ್ ಪಡೆದಿದ್ದೇನೆ, ನನ್ನದು ಭತ್ತದ ಮಿಲ್ ಇದೆ, ನೀವು ನನಗೆ ಭತ್ತವನ್ನು ಕಳುಹಿಸಿ ಎಂದು ಪರಿಚಯ ಮಾಡಿಕೊಂಡಿದ್ದರು.
ಆಂಧ್ರಪ್ರದೇಶ ಮೂಲದ ನರಸಯ್ಯ ಅವರು 2023ರ ಏಪ್ರಿಲ್ ಹಾಗೂ ಮೇ ಈ ಎರಡು ತಿಂಗಳ ಅವಧಿಯಲ್ಲಿ ಭತ್ತ ಕಳುಹಿಸಿದ್ದರು. ಅದರಲ್ಲಿ ಮೊದಲು ಕಳುಹಿಸಿದ್ದ 15 ಲೋಡ್ ಭತ್ತದ ಪೈಕಿ ಒಂದಿಷ್ಟು ಹಣವನ್ನು ಪಾವತಿ ಮಾಡಿದ ಶ್ರೀನಿವಾಸ, ನರಸಯ್ಯ ಅವರ ಬಳಿ ನಂಬಿಕೆ ಬೆಳೆಸಿಕೊಂಡಿದ್ದರು. ಅದೇ ನಂಬಿಕೆಯ ಮೇಲೆ ನರಸಯ್ಯ ಅವರು ಉಳಿದ 25 ಲೋಡ್ ಭತ್ತವನ್ನು ನೆರೆಹೊರೆಯ ರೈತರಿಂದ ಪಡೆದು ಶ್ರೀನಿವಾಸರಿಗೆ ಮತ್ತೆ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಉಳಿದ 25 ಲೋಡ್ ಭತ್ತದ ಬಾಕಿ ಹಣವನ್ನು ಪಾವತಿಸದೇ ಸಬೂಬು ಹೇಳುತ್ತಾ ಬಂದಿದ್ದರು ಎಂದು ದೂರು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಉಮಾಪ್ರಶಾಂತ್ ಹೇಳಿದ್ದೇನು ?:"ಶ್ರೀನಿವಾಸ್ ಎಂಬುವವರು ದಾವಣಗೆರೆ ಮಹಾಲಕ್ಷ್ಮಿ ಲೇಔಟ್ನ ನಿವಾಸಿ. ಚೌಕಿಪೇಟೆಯಲ್ಲಿ ರಾಜೇಶ್ವರಿ ಟ್ರೇಡರ್ಸ್ ಅಂಗಡಿ ಇಟ್ಟುಕೊಂಡಿದ್ದಾರೆ. ಇವರು ರೈತರಿಂದ ಹಾಗೂ ದಲ್ಲಾಳಿಗಳಿಂದ ಭತ್ತ ಹಾಗೂ ಮೆಕ್ಕೆಜೋಳವನ್ನ ಆಗಾಗ ಖರೀದಿಸುತ್ತಿದ್ದರು. ಮುಂಚಿತವಾಗಿ ಭತ್ತ ಹಾಗೂ ಜೋಳವನ್ನ ಖರೀದಿಸಿ ಅವರಿಗೆ ಹಣ ನೀಡದೇ ಮೋಸ ಮಾಡುತ್ತಿದ್ದರು ಎಂದು ಇವರ ವಿರುದ್ಧ ನಮ್ಮಲ್ಲಿ ಇಲ್ಲಿಯವರೆಗೆ ಒಟ್ಟು ಏಳು ಪ್ರಕರಣಗಳು ದಾಖಲಾಗಿರುತ್ತವೆ. ಇದರ ಸಂಬಂಧ ನಿನ್ನೆ ಇವರನ್ನ ಬಂಧಿಸಿ, ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ'' ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಮೆಡಿಕಲ್ ಸೀಟು ಕೊಡಿಸುವುದಾಗಿ ಉದ್ಯಮಿಗೆ ₹1.5 ಕೋಟಿ ವಂಚನೆ ಆರೋಪ: ಇಬ್ಬರ ಬಂಧನ - Fraud Case