ಕರ್ನಾಟಕ

karnataka

ETV Bharat / state

ಪ್ರಜಾಪ್ರಭುತ್ವ ಉಳಿಸಲು ಅರವಿಂದ ಕೇಜ್ರಿವಾಲ್‌ ಜೊತೆ ಜೈಲಿಗೆ ಹೋಗಲು ಸಿದ್ಧ: ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು - Arvind kejriwal arrest - ARVIND KEJRIWAL ARREST

ಕೇಜ್ರಿವಾಲ್ ಅವರ ಜನಪ್ರಿಯತೆ ಸಹಿಸದೇ ಕುತಂತ್ರದಿಂದ ಬಂಧಿಸಲಾಗಿದೆ. ಜಾಮೀನು ಕೂಡ ಸಿಗದಂತೆ ತಂತ್ರ ಮಾಡಲಾಗಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಆರೋಪಿಸಿದ್ದಾರೆ.

Dark Day celebrations at the citys Freedom Park
ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರಾಳ ದಿನಾಚರಣೆ

By ETV Bharat Karnataka Team

Published : Mar 22, 2024, 3:20 PM IST

ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರಾಳ ದಿನಾಚರಣೆ

ಬೆಂಗಳೂರು :ದೇಶಾದ್ಯಂತ ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆಯನ್ನು ಸಹಿಸಲಾಗದೇ, ಪ್ರಧಾನಿ ನರೇಂದ್ರ ಮೋದಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕೇಜ್ರಿವಾಲ್ ಅವರನ್ನು ಬಂಧಿಸಿದ್ದಾರೆ. ಇದಕ್ಕೆಲ್ಲ ಕೇಜ್ರಿವಾಲ್ ಆಗಲಿ ನಾವಾಗಲಿ ಹೆದರುವುದಿಲ್ಲ. ದೇಶಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಹೇಳಿದರು.

ಆಮ್ ಆದ್ಮಿ ಪಾರ್ಟಿ ನಾಯಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಎಎಪಿ ನಾಯಕರು ಮತ್ತು ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರಾಳ ದಿನಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೊರಟವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಐಟಿ, ಇ.ಡಿಯಂತಹ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ವಿರುದ್ಧ ಇರುವವರನ್ನು ಹಣಿಯಲು ಕೇಂದ್ರ ಸರ್ಕಾರ ಸಂಚು ಮಾಡಿದೆ. ಕೇಜ್ರಿವಾಲ್ ಅವರ ಜನಪ್ರಿಯತೆ ಸಹಿಸದೇ ಕುತಂತ್ರದಿಂದ ಬಂಧಿಸಲಾಗಿದೆ. ಜಾಮೀನು ಕೂಡ ಸಿಗದಂತೆ ತಂತ್ರ ಮಾಡಲಾಗಿದೆ ಎಂದು ದೂರಿದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರಾಳ ದಿನಾಚರಣೆ

ಚುನಾವಣಾ ಬಾಂಡ್ ಹೆಸರಿನಲ್ಲಿ ಕಪ್ಪುಹಣವನ್ನು ತಮ್ಮ ಪಕ್ಷದ ಅಕೌಂಟ್‌ಗೆ ಹಾಕಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಹಲವರನ್ನು ಹೆದರಿಸಿ, ಅವರ ಪಕ್ಷದ ಚುನಾವಣಾ ಬಾಂಡ್‌ಗಳನ್ನು ಖರೀದಿ ಮಾಡುವಂತೆ ಮಾಡಿದ್ದಾರೆ. ದೇಶದ್ರೋಹದ ಕೆಲಸ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿ ನಾಯಕರು. ಅವರನ್ನು ಮೊದಲು ಜೈಲಿಗೆ ಹಾಕಬೇಕು ಎಂದರು.

ಬಂಧಿಸಿದ ಮಾತ್ರಕ್ಕೆ ನಾವಾಗಲೀ ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಅವರಾಗಲಿ ಹೆದರುವುದಿಲ್ಲ. ನಮ್ಮನ್ನು ಕೂಡ ಜೈಲಿಗೆ ಹಾಕಲಿ. ಈ ಬಾರಿಯ ಚುನಾವಣೆ ಪಾರದರ್ಶಕವಾಗಿ, ನ್ಯಾಯಯುತವಾಗಿ ನಡೆಯುತ್ತದೆ ಎನ್ನುವ ನಂಬಿಕೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ಮಾತನಾಡಿ, ಅರವಿಂದ್ ಕೇಜ್ರಿವಾಲ್ ಅವರ ಜನಪ್ರಿಯತೆ ನೋಡಿ ಪ್ರಧಾನಿ ಮೋದಿ ಭಯಗೊಂಡಿದ್ದಾರೆ. ಅದಕ್ಕಾಗಿಯೇ ಕೇಜ್ರಿವಾಲ್‌ ಅವರನ್ನು ಕಟ್ಟಿಹಾಕಲು ಅಕ್ರಮವಾಗಿ ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐಯಂತಹ ಸಂಸ್ಥೆಗಳನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದರು.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರಾಳ ದಿನಾಚರಣೆ

ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಯದ ಮೇರೆಗೆ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ಭ್ರಷ್ಟಾಚಾರ ಮಾಡಿರುವ ಬಿಜೆಪಿ ದೇಶದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

400 ಸೀಟುಗಳನ್ನು ಗೆಲ್ಲುತ್ತೇನೆ ಎನ್ನುವ ಪ್ರಧಾನಿ ಮೋದಿ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಲಿ. ಕೇಜ್ರಿವಾಲ್ ಅವರ ಜನಪ್ರಿಯತೆ ಕಂಡು ಹೆದರಿದ್ದಾರೆ. ಅದಕ್ಕಾಗಿಯೇ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಅವರನ್ನು ಬಂಧಿಸಲಾಗಿದೆ. ನಿಮ್ಮನ್ನು ದೇಶದಿಂದ ಹೊರಹಾಕಲು ಮತದಾರರು ಕಾಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸಹವಾನಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ರಾಜ್ಯ ಕಾರ್ಯದರ್ಶಿಗಳಾದ ಉಷಾ ಮೋಹನ್, ಬಸವರಾಜ ಮುದಿಗೌಡರ್, ನಗರಾಧ್ಯಕ್ಷ ಡಾ. ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ, ಅಶೋಕ್ ಮೃತ್ಯುಂಜಯ, ಚೆನ್ನಪ್ಪ ಗೌಡ, ಆರಾಧ್ಯ, ಜ್ಯೋತಿಷ್ ಕುಮಾರ್, ವೀಣಾ ಸರವು ಮಹಾಲಕ್ಷ್ಮಿ, ಅಂಜನಾ ಗೌಡ ಸತ್ಯವಾಣಿ, ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ಇದನ್ನೂ ಓದಿ :ಕೇಜ್ರಿವಾಲ್ ಒಬ್ಬ ದುರಂಕಾರಿ, ಸಮನ್ಸ್‌ಗಳಿಗೆ ಉತ್ತರಿಸದ ಕಾರಣ ಬಂಧನ: ಪ್ರಹ್ಲಾದ್ ‌ಜೋಶಿ - Prahlad Joshi

ABOUT THE AUTHOR

...view details