ಬೆಂಗಳೂರು:ಕೆ.ಸಿ.ಜನರಲ್ ಆಸ್ಪತ್ರೆಗೆ ಇಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಹಾಗೂ ಜಸ್ಟೀಸ್ ಬಿ.ವೀರಪ್ಪ ನೇತೃತ್ವದ ನಿಯೋಗ ದಿಢೀರ್ ಭೇಟಿ ನೀಡಿತು.
ಮಲ್ಲೇಶ್ವರಂನಲ್ಲಿರುವ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ವೈದ್ಯರ ಅಲಭ್ಯತೆ, ಔಷಧಗಳ ಕೊರತೆ, ಶುಚಿತ್ವದ ಕುರಿತು ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿರುವ ಲೋಕಾಯುಕ್ತ ನ್ಯಾಯಮೂರ್ತಿ ನೇತೃತ್ವದ ನಿಯೋಗ, ರೋಗಿಗಳ ಅಹವಾಲು ಆಲಿಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಪ್ರತಿಕ್ರಿಯೆ (ETV Bharat) "ಆಸ್ಪತ್ರೆಗೆ ಕಳೆದ ತಿಂಗಳು ತಮ್ಮ ಮಗಳನ್ನು ಹೆರಿಗೆಗೆಂದು ಕರೆತಂದಾಗ ವಾರ್ಡ್‌ನ ಸಿಬ್ಬಂದಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ತಾಯಿ ಕಾರ್ಡ್‌ನ್ನೇ ಕಿತ್ತಿಟ್ಟುಕೊಂಡು ಕನಿಷ್ಟ ಎಂದರೂ 500 ರೂಪಾಯಿ ಕೇಳಿದರು" ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ಮಂಜುಳಾ ಎಂಬವರು ದೂರಿದರು.
"ಅಲ್ಲದೇ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದಿರುವುದರಿಂದ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ. ಆಸ್ಪತ್ರೆಯಲ್ಲಿ ಸರಿಯಾಗಿ ಶುಚಿತ್ವ ಕಾಪಾಡುತ್ತಿಲ್ಲ. ಔಷಧಿಗಳ ಕೊರತೆಯಿದೆ. ವ್ಹೀಲ್ ಚೇರ್ ಕೂಡ ರೋಗಿಗಳಿಗೆ ಸರಿಯಾಗಿ ಸಿಗುವುದಿಲ್ಲ" ಎಂದು ರೋಗಿಗಳು ದೂರು ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಪ್ರತಿಕ್ರಿಯೆ: ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್, "ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಿರುವುದು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸಬೇಕಾದ ಜವಾಬ್ದಾರಿ ವೈದ್ಯಕೀಯ ಇಲಾಖೆ, ಸೂಪರಿಂಟೆಂಡೆಂಟ್ ಹಾಗೂ ವೈದ್ಯರುಗಳ ಮೇಲಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಿದ್ದೇವೆ" ಎಂದರು.
"ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ಮತ್ತು ನರ್ಸ್ ಹಣಕ್ಕೆ ಬೇಡಿಕೆಯಿಡುತ್ತಾರೆ. ಹಣ ಕೊಡದಿದ್ದಾಗ ಚಿಕಿತ್ಸೆ ನೀಡುವುದಿಲ್ಲ ಎಂದು ರೋಗಿಗಳಿಂದ ಸಾಕಷ್ಟು ದೂರುಗಳು ಬಂದಿದ್ದವು. ರೋಗಿಯೊಬ್ಬರು ತಮ್ಮ ಸಂಬಂಧಿಯನ್ನು ಕರೆದುಕೊಂಡು ಬಂದಾಗ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ವೈದ್ಯರ ಸಮ್ಮುಖದಲ್ಲೇ ಆರೋಪಿಸಿದರು. ಮತ್ತೋರ್ವರು ಕಳೆದ ಒಂದು ಗಂಟೆಯಿಂದ ಕಾಯುತ್ತಿದ್ದರೂ ವ್ಹೀಲ್ ಚೇರ್ ಕೊಟ್ಟಿಲ್ಲ, ಕೊನೆಗೆ ಯಾವುದೋ ಮುರಿದಿರುವ ಚೇರ್ ಕೊಟ್ಟರು ಎಂದು ಆರೋಪಿಸಿದರು. ವೈದ್ಯರನ್ನು ಕೇಳಿದಾಗ 5 ವ್ಹೀಲ್ ಚೇರ್ ಇವೆ, ಬೇರೆ ರೋಗಿಗಳು ಅವುಗಳನ್ನು ಬಳಸುತ್ತಿದ್ದುದರಿಂದ ವಿಳಂಬವಾಗಿದೆ ಎಂದರು. ಆದರೆ ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಉತ್ತರಿಸಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ. ಜೊತೆಗೆ ವಾರ್ಡ್‌ಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಕೆಲವೆಡೆ ಧೂಳಿನಿಂದ ಕೂಡಿದೆ, ಶೌಚಾಲಯದಲ್ಲಿ ನೀರಿನ ಕೊರತೆ ಇದೆ. ಕರ್ತವ್ಯದಲ್ಲಿರಬೇಕಿದ್ದ ಐವರು ವೈದ್ಯರಲ್ಲಿ ಒಬ್ಬರು ಮಾತ್ರ ನಮಗೆ ಸಿಕ್ಕಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲೇ ಈ ರೀತಿಯಾದರೆ ಏನು ಮಾಡಬೇಕು?. ಪ್ರತಿದಿನ ಮುಂಜಾನೆ, ರಾತ್ರಿ ರೋಗಿಗಳು ಬಂದು ದಾಖಲಾಗುತ್ತಾರೆ. ಡಾಕ್ಟರ್ಸ್, ಮೆಡಿಕಲ್ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಕಡೆ ಗಮನ ಹರಿಸಬೇಕು. ಇವೆಲ್ಲ ಸಮಸ್ಯೆಗಳ ಬಗ್ಗೆ ನಾವು ವರದಿ ದಾಖಲು ಮಾಡಿಕೊಂಡಿದ್ದೇವೆ. ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ" ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದರು.
ಇದನ್ನೂ ಓದಿ:ಬಳ್ಳಾರಿಯ ಬಿಮ್ಸ್ನಲ್ಲಿ ಬಾಣಂತಿ ಸಾವು: ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ನಿರ್ಲಕ್ಷ್ಯ ಆರೋಪ