ಕರ್ನಾಟಕ

karnataka

ETV Bharat / state

ದಾವಣಗೆರೆ: ಕುಟುಂಬಸ್ಥರು ನಮಾಜ್​ ಮಾಡುತ್ತಿದ್ದಾಗ ಆಟವಾಡುತ್ತ ನೀರಿನ ತೊಟ್ಟಿಗೆ ಬಿದ್ದು ಬಾಲಕ ಸಾವು - child died

ಎಲ್ಲರೂ ಮನೆ ಒಳಗೆ ನಮಾಜ್​​ ಮಾಡುತ್ತಿದ್ದ ವೇಳೆ ಆಟ ಆಡುತ್ತಾ ಹೊರಗೆ ಬಂದ ಬಾಲಕ ಎದುರು ಮನೆಯ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನೀರಿನ ತೊಟ್ಟಿಗೆ ಬಿದ್ದು ಮಗು ಸಾವು
ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

By ETV Bharat Karnataka Team

Published : Mar 18, 2024, 1:06 PM IST

ದಾವಣಗೆರೆ:ಆಟ ಆಡುತ್ತಾ ಎದುರು ಮನೆಯ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ. ಅಸದ್ ಅಹಮದ್ (03) ಮೃತ ಬಾಲಕ.

ರಂಜಾನ್​ ಹಿನ್ನೆಲೆ ಮನೆಯಲ್ಲಿ ಎಲ್ಲರೂ ಉಪವಾಸ ಇದ್ದು (ರೋಝಾ) ನಮಾಜ್​​ ಮಾಡುತ್ತಿದ್ದರು. ಬಳಿಕ ಮನೆ ಒಳಗೆ ಮಗು ಕಾಣದೇ ಇರುವುದನ್ನು ಗಮನಿಸಿ ಊರಿಡಿ ಹುಡುಕಿದ್ದಾರೆ. ಆದರೂ ಮಗು ಪತ್ತೆಯಾಗಿರಲಿಲ್ಲ. ಆಕಸ್ಮಿಕವಾಗಿ ಎದುರು ಮನೆಯಲ್ಲಿ ಪರಿಶೀಲಿಸಿದಾಗ ಮಗು ನೀರಿನ ತೊಟ್ಟಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ಆದರೆ ನೀರಲ್ಲಿ ಬಿದ್ದು ಆಗಲೇ ಎರಡು ಗಂಟೆಗಳು ಕಳೆದಿದ್ದರಿಂದ ಮಗು ಉಸಿರು ಚೆಲ್ಲಿದೆ. ತಕ್ಷಣ ಹತ್ತಿರದ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿಲ್ಲ.

ಮೃತ ಬಾಲಕನ ತಾಯಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ತನ್ನ ತವರು ಮನೆಗೆ ಹೆರಿಗೆಗಾಗಿ ಬಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ‌. ಪೋಷಕರು ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಯುಡಿಆರ್(ಅಸ್ವಾಭಾವಿಕ ಸಾವಿನ ವರದಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಿಪಿಐ ಮುದ್ದುರಾಜ್​ ಅವರು ಮಾಹಿತಿ ನೀಡಿದರು.

ಸಿಪಿಐ ಮುದ್ದುರಾಜ್​​ ಹೇಳಿದ್ದಿಷ್ಟು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಸಿಪಿಐ ಮುದ್ದುರಾಜ್ ಅವರು ಪ್ರತಿಕ್ರಿಯಿಸಿ "ಮೃತ ಬಾಲಕನ ತಾಯಿ ಮೂಲತಃ ಶಿಕಾರಿಪುರವರಾಗಿದ್ದು, ಹೆರಿಗೆಗೆಂದು ಹೊನ್ನಾಳಿಗೆ ತನ್ನ ತವರು ಮನೆಗೆ ಬಂದಿದ್ದರು. ಭಾನುವಾರ ಸಂಜೆ 6 ಗಂಟೆಗೆ ಬಾಲಕ ಆಡುತ್ತ ಎದುರು ಮನೆಯ ನೀರಿನ ತೊಟ್ಟಿಯಲ್ಲಿ ಬಿದ್ದಿದ್ದಾನೆ. ಇದು ಕುಟುಂಬಸ್ಥರ ಗಮನಕ್ಕೆ ಬಂದಿಲ್ಲ. ಇದರಿಂದ ಇಡೀ ಊರು ಹುಡುಕಾಡಿದರು ಕೂಡ ಮಗು ಸಿಕ್ಕಿರಲಿಲ್ಲ. ಆಕಸ್ಮಿಕವಾಗಿ ತೊಟ್ಟಿಯನ್ನು ಪರಿಶೀಲಿಸಿದಾಗ ಮಗು ಸಿಕ್ಕಿದೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದೆ. ಈ ಸಂಬಂಧ ಯುಡಿಆರ್ ಪ್ರಕರಣ ದಾಖಲಾಗಿದೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಗೋದಾಮಿನಲ್ಲಿ ಅಗ್ನಿ ಅವಘಡ, ದಿನಬಳಕೆ ವಸ್ತುಗಳು ಸುಟ್ಟು ಕರಕಲು

ABOUT THE AUTHOR

...view details