ಚಾಮರಾಜನಗರ:ಗಡಿ ಜಿಲ್ಲೆಯಲ್ಲಿ ಆನೆ ಗಣತಿ ಎರಡನೇ ದಿನವೂ ಮುಂದುವರೆದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ ಮತ್ತು ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಗಜ ಗಣತಿ ನಡೆದಿದೆ. ಮೊದಲ ದಿನ 15 ಕಿ.ಮೀ ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಗಿದೆ.
ಪ್ರತಿ ಬೀಟ್ನ ಎರಡು ಕಿ.ಮೀಗಳ ವ್ಯಾಪ್ತಿಯಲ್ಲಿ ಆನೆ ಹಾಕಿರುವ ಲದ್ದಿ ಪರಿಶೀಲಿಸಿ ಆನೆಯ ಗಾತ್ರ, ಮರಿಯಾನೆಯಾ, ಗುಂಪಿನಲ್ಲಿರುವ ಆನೆಗಳಾ ಎಂಬುದರ ಅಂದಾಜು ಮಾಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್ಗಳು, ಕಾವೇರಿ ವನ್ಯಜೀವಿಧಾಮದ 43 ಬೀಟ್ಗಳು, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆಯುತ್ತಿದ್ದು, ಶನಿವಾರದಂದು ಅಂತ್ಯವಾಗಲಿದೆ.
ಜಿಲ್ಲೆಯಲ್ಲಿ ನಿನ್ನೆಯಿಂದ ಗಜ ಗಣತಿ ಆರಂಭ: ಇನ್ನು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ನಿನ್ನೆಯಿಂದ(ಗುರುವಾರ) ಮೂರು ದಿನಗಳ ಗಜ ಗಣತಿ ಆರಂಭಿಸಿತ್ತು. ನಿನ್ನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದರು.