ಬೆಂಗಳೂರು:ನವೆಂಬರ್ 19ರಿಂದ 21ರವರೆಗೆ ಏಷ್ಯಾದ ಅತಿದೊಡ್ಡ ಟೆಕ್ ಶೃಂಗಸಭೆಯಾದ 27ನೇ ಬೆಂಗಳೂರು ಟೆಕ್ ಶೃಂಗಸಭೆ -2024 ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಐಟಿ - ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, 'ಅನ್ಬೌಂಡ್' ಎಂಬ ಥೀಮ್ನಡಿ ಆಯೋಜಿಸಿರುವ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಸ್ಟಾರ್ಟ್ಅಪ್ಗಳ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಜಾಗತಿಕ ಪಾಲುದಾರಿಕೆಗೆ ಆದ್ಯತೆ ನೀಡಲಾಗುತ್ತಿದೆ. ತಾಂತ್ರಿಕ ಉತ್ಕೃಷ್ಟತೆ, ನಾವೀನ್ಯತೆ ಮತ್ತು ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಸ್ಟಾರ್ಟ್ಅಪ್ಗಳ ಬೆಳವಣಿಗೆ ಮೂಲಕ ರಾಜ್ಯದ ಹಿರಿಮೆ ಹೆಚ್ಚಿಸಲು ಆಯೋಜಿಸಿರುವ BTS-2024 ಅನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.
ವಿವಿಧ ದೇಶಗಳ ಉನ್ನತಮಟ್ಟದ ನಿಯೋಗ ಭಾಗಿ: ಉದ್ಘಾಟನಾ ಸಮಾರಂಭದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಫಿನ್‌ಲ್ಯಾಂಡ್‌ನೊಂದಿಗೆ ಎರಡು ತಿಳಿವಳಿಕೆ ಪತ್ರಗಳಿಗೆ ಸಹಿ ಮತ್ತು ಶಾರ್ಜಾ ಇನ್ನೋವೇಶನ್ ಅಥಾರಿಟಿಯೊಂದಿಗೆ (ಯುಎಇ) ಆಳವಾದ ಜಾಗತಿಕ ಸಹಯೋಗವನ್ನು ಉತ್ತೇಜಿಸುವ ಉದ್ದೇಶದ ಪತ್ರಕ್ಕೆ ಸಹಿ ಹಾಕಲಾಗುತ್ತದೆ. BTS 2024ರಲ್ಲಿ ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್, ಆಸ್ಟ್ರಿಯಾ, ಇಯು, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಪೋಲೆಂಡ್, ಜಪಾನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಇಸ್ರೇಲ್ ಮತ್ತು ಯುಎಸ್ ಸೇರಿದಂತೆ 15ಕ್ಕೂ ಹೆಚ್ಚು ದೇಶಗಳ ಉನ್ನತಮಟ್ಟದ ನಿಯೋಗಗಳು, ಸರ್ಕಾರಿ ಅಧಿಕಾರಿಗಳು, ಉದ್ಯಮದ ಮುಖಂಡರು ಮತ್ತು ನವೋದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
BTS 2024 ಆರು ಟ್ರ್ಯಾಕ್‌ಗಳಲ್ಲಿ ಬಹು-ಹಂತದ ಸಮ್ಮೇಳನವನ್ನು ಒಳಗೊಂಡಿರುತ್ತದೆ. ಐಟಿ, ಡೀಪ್ ಟೆಕ್ ಮತ್ತು ಟ್ರೆಂಡ್ಸ್ , ಬಯೋಟೆಕ್, ಹೆಲ್ತ್ ಟೆಕ್, ಸ್ಟಾರ್ಟ್ ಅಪ್ ಎಕೋಸಿಸ್ಟಮ್, ಗ್ಲೋಬಲ್ ಇನೋವೇಶನ್ ಅಲಯನ್ಸ್, ಭಾರತ ಮತ್ತು ಯುಎಸ್ಎ ಟೆಕ್ ಕಾನ್ ಕ್ಲೇವ್ ಮತ್ತು ಹೊಸದಾಗಿ ಪರಿಚಯಿಸಲಾದ ಎಲೆಕ್ಟ್ರೋ-ಸೆಮಿಕಾನ್ ಟ್ರ್ಯಾಕ್ ಬಗ್ಗೆ ಸಮ್ಮೇಳನ ನಡೆಯಲಿದೆ. ಉದ್ಯಮದ ಕ್ಯಾಪ್ಟನ್‌ಗಳು, ನೀತಿ ನಿರೂಪಕರು, ರಾಜತಾಂತ್ರಿಕರು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಪ್ರಸಿದ್ಧ ಲೇಖಕರು ಮತ್ತು ಕಲಾವಿದರು ಸೇರಿದಂತೆ ಸ್ಟಾರ್ ಸ್ಪೀಕರ್‌ಗಳು ಸಮ್ಮೇಳನದ ವೇದಿಕೆಯಲ್ಲಿರುತ್ತಾರೆ ಎಂದು ತಿಳಿಸಿದರು.
ಮೊದಲ ಹಂತದ ಸೆಷನ್:ಅಮನ್‌ದೀಪ್ ಸಿಂಗ್ ಗಿಲ್, ಅಂಡರ್-ಸೆಕ್ರೆಟರಿ-ಜನರಲ್, ಟೆಕ್ ರಾಯಭಾರಿ-UN, ವಿಪ್ರೋ ಲಿಮಿಟೆಡ್‌ನ ಕಾರ್ಯಕಾರಿ ಅಧ್ಯಕ್ಷ ರಿಶಾದ್ ಪ್ರೇಮ್‌ಜಿ, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಶ್ವೇತಭವನ ಅಧ್ಯಕ್ಷರ ಉಪ ಸಹಾಯಕ ಮತ್ತು ಸೈಬರ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಉಪರಾಷ್ಟ್ರೀಯ ಭದ್ರತಾ ಸಲಹೆಗಾರ ಡಾ.ಅನ್ನೆ ನ್ಯೂಬರ್ಗರ್, ಟಾಟಾ ಸನ್ಸ್ ಲಿಮಿಟೆಡ್ ಬ್ರಾಂಡ್ ಕಸ್ಟೋಡಿಯನ್ ಹರೀಶ್ ಭಟ್, ಲೆನ್ಸ್‌ಕಾರ್ಟ್ ಸಹ-ಸಂಸ್ಥಾಪಕ ಪೆಯೂಶ್ ಬನ್ಸಾಲ್ ಸೇರಿದಂತೆ ಅನೇಕ ಗಣ್ಯರು ಗ್ಲೋಬಲ್ ಮೊದಲ ಹಂತದ ಸೆಷನ್ಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಗ್ಲೋಬಲ್ ಹಂತ-2ರಲ್ಲಿ ಯುಎಸ್-ಇಂಡಿಯಾ ಟೆಕ್ ಸಹಯೋಗದೊಂದಿಗೆ ಭಾರತ-ಯುಎಸ್ಎ ಟೆಕ್ ಕಾನ್ಕ್ಲೇವ್, ಯುಎಸ್‌ಐಬಿಸಿ ಕ್ಯುರೇಟೆಡ್ ಸೆಷನ್‌ಗಳು ನಡೆಯಲಿವೆ. ಕೃಷಿ, ಲಾಜಿಸ್ಟಿಕ್ಸ್, ಬಾಹ್ಯಾಕಾಶ ಮತ್ತು ಶಿಕ್ಷಣದಾದ್ಯಂತ AI ಪ್ರಭಾವ ಮತ್ತು AMCHAM, ಸೈಬರ್ ಸುರಕ್ಷತೆ ಮತ್ತು GCCಗಳು ಮತ್ತು GVCಗಳಲ್ಲಿನ ರೂಪಾಂತರಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ನವೀನ ಪರಿಹಾರ ಪ್ರದರ್ಶಿಸುವ ಸ್ಟಾರ್ಟ್‌ಅಪ್ ಆಹ್ವಾನ: ಶೃಂಗಸಭೆಯು ಉನ್ನತಮಟ್ಟದ ಕಾರ್ಯತಂತ್ರದ ದುಂಡುಮೇಜಿನ ಸಭೆಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಆಹ್ವಾನಿತ ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಕಾರ್ಪೊರೇಟ್‌ಗಳು, ಸ್ಟಾರ್ಟ್‌ಅಪ್‌ಗಳು ಮತ್ತು ನೀತಿ ನಿರೂಪಕರು ಭಾಗವಹಿಸುತ್ತಾರೆ. AI/ GovTechನಲ್ಲಿನ ರೌಂಡ್‌ಟೇಬಲ್, ಆಡಳಿತವನ್ನು ಮರು ರೂಪಿಸುವ, ಪ್ರಮುಖ ಸವಾಲುಗಳನ್ನು ಎದುರಿಸುವ ಮತ್ತು ಡಿಜಿಟಲ್ ಯುಗದಲ್ಲಿ ರಾಜ್ಯದ ಬೆಳವಣಿಗೆಯನ್ನು ವೇಗಗೊಳಿಸುವಂತಹ ತಮ್ಮ ನವೀನ ಪರಿಹಾರಗಳನ್ನು ಪ್ರದರ್ಶಿಸುವ ಸ್ಟಾರ್ಟ್‌ಅಪ್‌ಗಳನ್ನು ಆಹ್ವಾನಿಸಲಾಗಿದೆ ಎಂದರು.
ಸ್ಟಾರ್ಟ್‌ಅಪ್ ಪೆವಿಲಿಯನ್ ಹೆಲ್ತ್‌ಟೆಕ್, ಅಗ್ರಿಟೆಕ್, ಮ್ಯಾನುಫ್ಯಾಕ್ಚರಿಂಗ್, ಎಡ್ಯುಟೆಕ್ ಒಳಗೊಂಡಂತೆ ಅತ್ಯಾಧುನಿಕ ಉತ್ಪನ್ನಗಳು ಮತ್ತು ಟೆಕ್ ಪರಿಹಾರಗಳನ್ನು ಪ್ರದರ್ಶಿಸುವ ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲಾಗುತ್ತದೆ. BTS - 2024 ಭಾರತ ಮತ್ತು ಹೊರಗಿನಿಂದ ಬರುವ 2,500ಕ್ಕೂ ಹೆಚ್ವು ಸ್ಟಾರ್ಟ್‌ಅಪ್‌ಗಳಿಗೆ ಪ್ರಮುಖ ವೇದಿಕೆಯಾಗಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇದನ್ನೂ ಓದಿ:ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಶೇ.70ರಷ್ಟು ತಕರಾರು ಅರ್ಜಿಗಳ ವಿಲೇವಾರಿ: ಸಚಿವ ಕೃಷ್ಣಬೈರೇಗೌಡ