India vs England 2nd T20: ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ಪ್ರಾರಂಭವಾಗಿದೆ. ಈಗಾಗಲೇ ಮೊದಲ ಪಂದ್ಯ ಮುಕ್ತಾಯಗೊಂಡಿದ್ದು ಶನಿವಾರ (ನಾಳೆ) ಎರಡನೇ ಪಂದ್ಯ ನಡೆಯಲಿದೆ. ಕೋಲ್ಕತ್ತಾದ ಈಡೆನ್ ಗಾರ್ಡನ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಲು ಟೀಂ ಇಂಡಿಯಾ ಮುಂದಾಗಿದೆ.
ಮೊತ್ತೊಂದೆಡೆ, ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಇಂಗ್ಲೆಂಡ್ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯಲಿದೆ. ಆದರೆ, 28 ಗಂಟೆಗೂ ಮುಂಚಿತವಾಗಿಯೆ ಇಂಗ್ಲೆಂಡ್ ಎರಡನೇ ಪಂದ್ಯಕ್ಕಾಗಿ ಆಡುವ ಹನ್ನೊಂದರ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ.
ಮೊದಲ ಪಂದ್ಯದಲ್ಲಿ ಆಡಿದ್ದ ಸ್ಟಾರ್ ಬೌಲರ್ ಗಸ್ ಅಟ್ಕಿನ್ಸನ್ ಎರಡನೇ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಬ್ರೈಡನ್ ಕಾರ್ಸ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಮೊದಲ ಪಂದ್ಯದಲ್ಲಿ ಗಸ್ ಅಟ್ಕಿಂಗ್ಸ್ 2 ಓವರ್ ಬೌಲ್ ಮಾಡಿ 38 ರನ್ ಬಿಟ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಅಟ್ಕಿನ್ಸನ್ ಬ್ಯಾಟಿಂಗ್‌ಗೂ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಮೊದಲ ಪಂದ್ಯದಲ್ಲಿ 13 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಔಟಾಗಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲರಾಗಿದ್ದ ಕಾರಣ ಅವರನ್ನು ಚೆನ್ನೈ ಪಂದ್ಯದಿಂದ ಹೊರಗಿಡಲಾಗಿದೆ.
12ನೇ ಆಟಗಾರನಾಗಿ ಜೇಮಿ ಸ್ಮಿತ್:ಇಂಗ್ಲೆಂಡ್ ಘೋಷಿಸಿದ ತಂಡದಲ್ಲಿ ಜೇಮಿ ಸ್ಮಿತ್ 12ನೇ ಆಟಗಾರನಾಗಿರಲಿದ್ದಾರೆ. ಒಂದು ವೇಳೆ ಅಂತಿಮ ತಂಡದಲ್ಲೂ ಬದಲಾವಣೆ ಮಾಡಲು ಬಯಸಿದರೇ ಬದಲಾದ ಆಟಗಾರನ ಸ್ಥಾನಕ್ಕೆ ಜೇಮಿ ಸ್ಮಿತ್ ತಂಡ ಸೇರಿಕೊಳ್ಳಲಿದ್ದಾರೆ. ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಬಳಿಕ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆ ಬಲಿಷ್ಠ ತಂಡದೊಂದಿಗೆ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಇಂಗ್ಲೆಂಡ್ ತಂಡ:ಬೆನ್ ಡಕೆಟ್, ಜೋಸ್ ಬಟ್ಲರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಹ್ಯಾರಿ ಬ್ರೂಕ್, ಜೇಮೀ ಓವರ್‌ಟನ್, ಜಾಕೋಬ್ ಬೆಥೆಲ್, ಜೋಫ್ರಾ ಆರ್ಚರ್, ಬ್ರೇಡೆನ್ ಕಾರ್ಸ್, ಮಾರ್ಕ್ ವುಡ್, ಆದಿಲ್ ರಶೀದ್.