ವಿಶಾಖಪಟ್ಟಣಂ (ಆಂಧ್ರಪ್ರದೇಶ):ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ನಡುವಿನ 2ನೇ ಟೆಸ್ಟ್ ಪಂದ್ಯ ಕೊನೆಯ ಘಟ್ಟ ತಲುಪಿದೆ. ಭಾರತ 2ನೇ ಇನ್ನಿಂಗ್ಸ್ನಲ್ಲಿ 255 ರನ್ ಗಳಿಸಿ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ನ 143 ರನ್ಗಳ ಲೀಡ್ ಸೇರಿ 399 ರನ್ಗಳ ಬೃಹತ್ ಗುರಿ ನೀಡಿದೆ. ಮೂರನೇ ದಿನದಂತ್ಯಕ್ಕೆ 2ನೇ ಇನಿಂಗ್ಸ್ ಆರಂಭಿಸಿದ ಆಂಗ್ಲ ಪಡೆ 1 ವಿಕೆಟ್ಗೆ 67 ರನ್ ಗಳಿಸಿದ್ದು, ಗೆಲುವಿಗೆ 332 ರನ್ ಬೇಕಿದೆ.
ಎಂದಿನಂತೆ ತಮ್ಮ ಬಾಜ್ಬಾಲ್ ಆಟದ ಮೂಲಕ ಬಿರುಸಿನ ಆರಂಭ ನೀಡಿದ ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಮೊದಲ ವಿಕೆಟ್ಗೆ 50 ರನ್ ಸೇರಿಸಿದರು. ಮೂರನೇ ದಿನದ ಆಟ ಮುಗಿಯಲು ಮೂರು ಓವರ್ ಬಾಕಿ ಇರುವಾಗ ಆರ್.ಅಶ್ವಿನ್ ಎಸೆತದಲ್ಲಿ ಡಕೆಟ್ ವಿಕೆಟ್ ನೀಡಿದರು. ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಭಾರತದ ಗೆಲುವಿಗೆ 9 ವಿಕೆಟ್ ಬೇಕಿದೆ. ಇನ್ನೂ 2 ಪೂರ್ಣ ದಿನದ ಆಟ ಬಾಕಿ ಇದೆ. 29 ರನ್ ಗಳಿಸಿರುವ ಜಾಕ್ ಕ್ರಾಲಿ, ನೈಟ್ ವಾಚ್ಮನ್ ರೆಹಾನ್ ಅಹ್ಮದ್ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಶತಕ ಗಳಿಸಿ ಲಯಕ್ಕೆ ಬಂದ ಗಿಲ್:28 ರನ್ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತಕ್ಕೆ ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಶಾಕ್ ನೀಡಿದರು. ಮೊದಲ ಓವರ್ನಲ್ಲೇ ನಾಯಕ ರೋಹಿತ್ ಶರ್ಮಾರನ್ನು ಕ್ಲೀನ್ಬೌಲ್ಡ್ ಮಾಡಿದರು. ಬಳಿಕ 2 ರನ್ ಅಂತರದಲ್ಲಿ ದ್ವಿಶತಕ ವೀರ ಜೈಸ್ವಾಲ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಇದು ತಂಡವನ್ನು ತುಸು ಒತ್ತಡಕ್ಕೆ ಸಿಲುಕಿಸಿತು.