ನವೀ ಮುಂಬೈ: ಹಶೀಮ್ ಆಮ್ಲಾ ಅವರ ಅರ್ಧಶತಕದ ಹೊರತಾಗಿಯೂ ಅಸೆಲಾ ಗುಣರತ್ನೆ ಮತ್ತು ಚಿಂತಕಾ ಜಯಸಿಂಘೆ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ಮಾಸ್ಟರ್ಸ್ ತಂಡವು ಫೆಬ್ರವರಿ 26ರಂದು ಇಲ್ಲಿ ನಡೆದ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ 2025ರ ಉದ್ಘಾಟನಾ ಲೀಗ್ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ವಿರುದ್ಧ ಏಳು ವಿಕೆಟ್ಗಳ ಗೆಲುವು ದಾಖಲಿಸಿತು.
181 ರನ್ಗಳ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮಾಸ್ಟರ್ಸ್ ತಂಡಕ್ಕೆ ನಾಯಕ ಕುಮಾರ ಸಂಗಕ್ಕಾರ ಮತ್ತು ಉಪುಲ್ ತರಂಗ 50 ರನ್ಗಳ ಭರ್ಜರಿ ಆರಂಭ ಒದಗಿಸಿದರೆ, ಆಫ್ ಸ್ಪಿನ್ನರ್ ಥಂಡಿ ತ್ಸಬಲಾಲಾ 12 ಎಸೆತಗಳಲ್ಲಿ ಇಬ್ಬರನ್ನೂ ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಗೆ ಮತ್ತೆ ಮುನ್ನಡೆ ಒದಗಿಸಿದರು. ಈ ಸಂದರ್ಭದಲ್ಲಿ ಲಹಿರು ತಿರಿಮನ್ನೆ ಅವರ ರನ್ ಔಟ್ ಶ್ರೀಲಂಕಾಗೆ ಮತ್ತಷ್ಟು ಆಘಾತ ತಂದಿತು.
3 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದ್ದ ಶ್ರೀಲಂಕಾ ಮಾಸ್ಟರ್ಸ್ ತಂಡಕ್ಕೆ ಗುಣರತ್ನೆ (ಅಜೇಯ 59) ಮತ್ತು ಜಯಸಿಂಘೆ (ಅಜೇಯ 51) ಅವರ ಅಜೇಯ 114 ರನ್ಗಳ ಜೊತೆಯಾಟವು ಗೆಲುವಿನತ್ತ ಮುನ್ನಡೆಸಿತು. ಗುಣರತ್ನೆ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಜಯಸಿಂಘೆ 23 ಎಸೆತಗಳಲ್ಲಿ ಅರ್ಧಶತಕದೊಂದಿಗೆ ತಂಡವನ್ನು ಮುನ್ನಡೆಸಿದರು.
ಇದಕ್ಕೂ ಮುನ್ನ ಶ್ರೀಲಂಕಾ ಮಾಸ್ಟರ್ಸ್ ನಾಯಕ ಕುಮಾರ ಸಂಗಕ್ಕಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಆಮ್ಲಾ 53 ಎಸೆತಗಳಲ್ಲಿ 76 ರನ್ ಗಳಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು.
ಮೊರ್ನೆ ವ್ಯಾನ್ ವೈಕ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ಆಮ್ಲಾ, 41 ರನ್ಗಳ ಸ್ಥಿರ ಜೊತೆಯಾಟವಾಡಿದರು. ಜಾಕ್ ಕಾಲಿಸ್ ಅವರೊಂದಿಗೆ ಮೂರನೇ ವಿಕೆಟ್ಗೆ 65 ರನ್ಗಳ ಜೊತೆಯಾಟದ ಮೂಲಕ ದಕ್ಷಿಣ ಆಫ್ರಿಕಾವನ್ನು ಮೂರು ಅಂಕಿಯ ಗಡಿ ದಾಟಿಸುವ ಮೂಲಕ ಆಮ್ಲಾ ತಮ್ಮ ಹಳೆಯ ಆಟದ ನೆನಪುಗಳು ಮರುಕಳಿಸುವಂತೆ ಮಾಡಿದರು.
ಎಡಗೈ ಸ್ಪಿನ್ನರ್ ಚತುರಂಗ ಡಿ ಸಿಲ್ವಾ 20 ಎಸೆತಗಳಲ್ಲಿ 24 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ನಾಯಕ ಕಾಲಿಸ್ ಅವರ ವಿಕೆಟ್ ಕಬಳಿಸಿದರು. ಕಾಲಿಸ್ ಮತ್ತು ಆಮ್ಲಾ ಅವರ ತ್ವರಿತ ಔಟ್ಗಳು ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ತಂಡವನ್ನು ಸಂಕಷ್ಟಕ್ಕೆ ದೂಡಿತು, 17 ನೇ ಓವರ್ ವೇಳೆಗೆ ಸ್ಕೋರ್ ಬೋರ್ಡ್ 138/4 ಆಗಿತ್ತು. ಆದರೆ 13 ಎಸೆತಗಳಲ್ಲಿ 28 ರನ್, ಡೇನ್ ವಿಲಾಸ್ ಅವರ ಮೂರು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಮತ್ತು ಜಾಕ್ವೆಸ್ ರುಡಾಲ್ಫ್ (9) ಅವರೊಂದಿಗಿನ ಅವರ 30 ರನ್ಗಳ ಜೊತೆಯಾಟವು ತಂಡಕ್ಕೆ ವೇಗವನ್ನು ಮರಳಿ ಪಡೆಯಲು ಸಹಾಯ ಮಾಡಿತು.
ಸಂಕ್ಷಿಪ್ತ ಸ್ಕೋರ್:ದಕ್ಷಿಣ ಆಫ್ರಿಕಾ ಮಾಸ್ಟರ್ಸ್ 180/6 (ಹಶೀಮ್ ಆಮ್ಲಾ 76, ಡೇನ್ ವಿಲಾಸ್ ಅಜೇಯ 28, ಜಾಕ್ ಕಾಲಿಸ್ 24; ಕ್ರಿಸ್ ವೋಕ್ಸ್ 22ಕ್ಕೆ 2) ಚತುರಂಗ ಡಿ ಸಿಲ್ವಾ 28ಕ್ಕೆ 2, ಇಸುರು ಉದಾನ 44ಕ್ಕೆ 2: ಶ್ರೀಲಂಕಾ ಮಾಸ್ಟರ್ಸ್ 183/3, ಅಸೆಲಾ ಗುಣರತ್ನೆ ಅಜೇಯ 59, ಚಿಂತಕ ಜಯಸಿಂಘೆ ಅಜೇಯ 51, ಉಪುಲ್ ತರಂಗ 29, ಥಂಡಿ ತ್ಸಬಲಾಲಾ 2/32)
ಇದನ್ನೂ ಓದಿ:ಜಿದ್ದಾಜಿದ್ದಿನ ಪಂದ್ಯದಲ್ಲಿ ಗೆದ್ದು ಬೀಗಿದ ಅಫ್ಘಾನಿಸ್ತಾನ; ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್ - IRFAN PATHAN DANCE