ಆಂಟ್ವರ್ಪ್ (ಬೆಲ್ಜಿಯಂ):ಇಲ್ಲಿ ನಡೆಯುತ್ತಿರುವ ಎಫ್‌ಐಎಚ್ ಹಾಕಿ ಪ್ರೊ ಲೀಗ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ವಿರುದ್ಧ 5-4 ಅಂತರದಿಂದ ರೋಚಕ ಗೆಲುವು ಸಾಧಿಸಿದೆ.
ಹಾಕಿ ಟೀಮ್ ಇಂಡಿಯಾದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ ಅರ್ಜೆಂಟೀನಾ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿದರು. 29ನೇ ನಿಮಿಷದಲ್ಲಿ ಮೊದಲು ಗೋಲು ಗಳಿಸಿದ ಹರ್ಮನ್‌ಪ್ರೀತ್ 50 ಮತ್ತು 52ನೇ ನಿಮಿಯದಲ್ಲಿ ಎರಡು ಗೋಲುಗಳನ್ನು ದಾಖಲಿಸಿದರು.
ಉಳಿದಂತೆ ಹುಂಡಲ್ ಅರೈಜಿತ್ ಸಿಂಗ್ (7ನೇ ನಿ) ಮತ್ತು ಗುರ್ಜಂತ್ ಸಿಂಗ್ (18ನೇ ನಿ) ತಲಾ ಒಂದು ಗೋಲು ಗಳಿಸಿ ಅರ್ಜೆಂಟೀನಾ ವಿರುದ್ಧ ಭಾರತದ ಗೆಲುವಿಗೆ ನೆರವಾದರು. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ 21 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ.
ಹೈಲೈಟ್ಸ್: ಮೊದಲಿಗೆ ಭಾರತವು ಉತ್ತಮ ಆರಂಭವನ್ನು ಮಾಡಿತು. ಮೊದಲ ಕ್ವಾರ್ಟರ್‌ನ ಬಹುಪಾಲು ಚೆಂಡನ್ನು ಕೀಪ್ ಮಾಡಿ ಉತ್ತಮ ಪ್ರದರ್ಶನ ತೋರಿತು. ಆದರೆ 3ನೇ ನಿಮಿಷದಲ್ಲಿ ಅರ್ಜೆಂಟೀನಾದ ಫೆಡೆರಿಕೊ ಅವರು ತಂಡದ ಪರ ಮೊದಲ ಗೋಲು ಗಳಿಸಿದರು. ಈ ಮೂಲಕ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿತು. ಈ ವೇಳೆ ಏಳನೇ ನಿಮಿಷದಲ್ಲಿ ಭಾರತದ ಅರೈಜಿತ್ ಪ್ರತಿದಾಳಿ ನಡೆಸಿ ಫೀಲ್ಡ್ ಗೋಲು ಗಳಿಸಿದರು. ಮೊದಲ ಕ್ವಾರ್ಟರ್ ಅಂತ್ಯದವರೆಗೂ ಉಭಯ ತಂಡಗಳು 1-1 ಸಮಬಲ ಸಾಧಿಸಿದವು.
ಎರಡನೇ ಕ್ವಾರ್ಟರ್ನಲ್ಲಿ ಭಾರತದ ಗುರ್ಜಂತ್ ಸಿಂಗ್ 18ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. ಆದರೆ ಅಷ್ಟರಲ್ಲಾಗಲೇ ಪಂದ್ಯದ 23ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡ ಹಲವು ಪೆನಾಲ್ಟಿ ಕಾರ್ನರ್ ಗಳನ್ನು ಗೆದ್ದುಕೊಂಡರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ 24ನೇ ನಿಮಿಷದಲ್ಲಿ ಅರ್ಜೆಂಟೀನಾ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡೆಸಿಕೊಂಡು ಗೋಲು ಗಳಿಸುವ ಮೂಲಕ 2-2ರಿಂದ ಸಮಬಲ ಸಾಧಿಸಿತು.
ಏತನ್ಮಧ್ಯೆ ಭಾರತದ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತ ತಂಡದ ಸ್ಕೋರ್ ಅನ್ನು 3-2 ಗೆ ತೆಗೆದುಕೊಂಡು ಪಂದ್ಯದ ರೋಚಕತೆಯನ್ನು ಹೆಚ್ಚಿಸಿದರು. ನಂತರ ಮೂರನೇ ಕ್ವಾರ್ಟರ್ನಲ್ಲಿ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಪಂದ್ಯದ 50 ಮತ್ತು 52ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಪೆನಾಲ್ಟಿ ಸ್ಟ್ರೋಕ್ನಲ್ಲಿ ಗೋಲುಗಳಿಸಿ ತಂಡದ ಸ್ಕೋರ್ 5-2ಕ್ಕೆ ಕೊಂಡೊಯ್ದರು. ಅರ್ಜೆಂಟೀನಾ ಕೂಡ ಪ್ರತಿದಾಳಿ ನಡೆಸಿ ಪಂದ್ಯದ ಕೊನೆಯ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಸ್ಕೋರ್ ಅನ್ನು ಸಮಬಲಗೊಳಿಸಲು ಪ್ರಯತ್ನಿಸಿತಾದರೂ ಸಾಧ್ಯವಾಗದೆ ಭಾರತದ ಎದುರು ಸೋಲನುಭವಿಸಿತು.
ಮುಂದಿನ ಪಂದ್ಯ: ಭಾರತ ತನ್ನ ಮುಂದಿನ ಪಂದ್ಯವನ್ನು ಜೂ.1ರಂದು ಜರ್ಮನಿ ವಿರುದ್ಧ ಆಡಲಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್: ನ್ಯೂಯಾರ್ಕ್ ತಲುಪಿದ ಭಾರತ ಕ್ರಿಕೆಟ್ ತಂಡ - T20 World Cup 2024