ಕ್ರಿಕೆಟ್ ಇತಿಹಾಸದಲ್ಲಿ ಇಂದಿಗೂ ಮುರಿಯಲು ಸಾಧ್ಯವಿಲ್ಲದ ಹಲವು ದಾಖಲೆಗಳಿವೆ. ಅವುಗಳಲ್ಲೊಂದು 3 ಓವರ್ಗಳಲ್ಲಿ ಶತಕ ಸಾಧನೆ.
ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಅಮೋಘ ದಾಖಲೆ ಬಹುತೇಕರಿಗೆ ಗೊತ್ತಿಲ್ಲ. ಒಮ್ಮೆ ಇವರು ಕೇವಲ ಮೂರು ಓವರ್‌ಗಳಲ್ಲೇ 100 ರನ್ ಬಾರಿಸಿದ್ದರು. ಇದು ನಂಬಲಸಾಧ್ಯವಾದರೂ ನಿಜ. 1931ರಲ್ಲಿ ನ್ಯೂ ಸೌತ್ ವೇಲ್ಸ್‌ನ ಬ್ಲೂ ಮೌಂಟೇನ್ಸ್ ಪ್ರದೇಶದಲ್ಲಿ ಬ್ಲ್ಯಾಕ್‌ಹೀತ್ ಮತ್ತು ಲಿಥ್‌ಗೋ ತಂಡಗಳ ನಡುವಣ ದೇಶೀಯ ಪಂದ್ಯದಲ್ಲಿ ಈ ದಾಖಲೆ ಸೃಷ್ಟಿಯಾಗಿತ್ತು.
ಬ್ರಾಡ್ಮನ್ ಸ್ಫೋಟಕ ಬ್ಯಾಟಿಂಗ್: ಈ ಪಂದ್ಯದಲ್ಲಿ ಬ್ಲ್ಯಾಕ್‌ಹೀತ್ ತಂಡದ ಪರ ಕಣಕ್ಕಿಳಿದಿದ್ದ ಬ್ರಾಡ್ಮನ್ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದರು. ಮೊದಲ ಓವರ್ ಬೌಲ್ ಮಾಡಿದ್ದ ಬಿಲ್ ಬ್ಲಾಕ್ ಅವರ ಪ್ರತಿ ಎಸೆತಗಳನ್ನೂ ದಂಡಿಸಿದ್ದ ಬ್ರಾಡ್ಮನ್, 33 ರನ್ ಬಾರಿಸಿದ್ದರು.
ಆದರೆ, ಓವರ್ ಆರಂಭವಾಗುವ ಮೊದಲು ಲಿಥ್‌ಗೋ ತಂಡದ ವಿಕೆಟ್ ಕೀಪರ್ ಲಿಯೋ ವಾಟರ್ಸ್, ಬ್ರಾಡ್‌ಮನ್ ಅವರನ್ನು ಸ್ಲೆಡ್ಜಿಂಗ್ ಮೂಲಕ ಕೆಣಕಿದ್ದರು. ಇದರಿಂದ ಕೆರಳಿದ ಬ್ರಾಡ್ಮನ್, ಆ ಓವರ್‌ನಲ್ಲಿ 6, 6, 4, 2, 4, 4, 6, 1 ರನ್ ಕಲೆಹಾಕಿದ್ದರು. ಇಲ್ಲಿಗೆ ತಣ್ಣಗಾಗದ ಅವರ ಸಿಟ್ಟು ಮುಂದಿನ ಓವರ್ನಲ್ಲೂ ಮುಂದುವರೆಯಿತು. ಬೇಕರ್ ಎಸೆದ ಮುಂದಿನ ಓವರ್‌ನಲ್ಲಿ 40 ರನ್ ಕಲೆಹಾಕಿದರು.
ಈ ಓವರ್‌ನಲ್ಲಿ 6, 4, 4, 6, 6, 4, 6, 4 ಬಾರಿಸಿದರು. ಮತ್ತೊಂದು ಓವರ್ ಬೌಲ್ ಮಾಡಲು ಬ್ಲ್ಯಾಕ್ ಮರಳಿದರು. ಈ ವೇಳೆ ಸ್ಟ್ರೈಕ್ನಲ್ಲಿದ್ದ ವೆಂಡೆಲ್ ಬಿಲ್ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಬ್ರಾಡ್ಮನ್‌ಗೆ ಸ್ಟ್ರೈಕ್ ನೀಡಿದರು. ಬ್ರಾಡ್ಮನ್ ಅಬ್ಬರ ಮುಂದುವರೆಯಿತು. ಈ ಓವರ್‌ನಲ್ಲಿ 1, 6, 6, 1, 1, 4, 4, 6 ರನ್‌ಗಳು ಹರಿದು ಬಂದವು. ಇದರಲ್ಲಿ ಬ್ರಾಡ್ಮನ್ 27 ರನ್ ಗಳಿಸಿದರು. ಮೂರು ಓವರ್‌ಗಳ ಅಂತ್ಯದ ವೇಳೆಗೆ, ಬ್ರಾಡ್ಮನ್ ಖಾತೆಗೆ 100 ರನ್‌ಗಳು ಸೇರಿದವು. ಕುತೂಹಲದ ವಿಷಯವೆಂದರೆ, ಆ ಕಾಲದಲ್ಲಿ ಒಂದು ಓವರ್‌ಗೆ 8 ಎಸೆತಗಳಿದ್ದವು.
ಬ್ರಾಡ್ಮನ್ ದ್ವಿಶತಕ: ಬ್ರಾಡ್ಮನ್ ಅವರ ಈ ವಿಧ್ವಂಸಕ ಬ್ಯಾಟಿಂಗ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯುತ್ತಮ ಇನ್ನಿಂಗ್ಸ್‌ಗಳಲ್ಲಿ ಒಂದೆಂದು ದಾಖಲಾಗಿದೆ. ಈ ಪಂದ್ಯದಲ್ಲಿ ಅಬ್ಬರಿಸಿದ ಬ್ರಾಡ್ಮನ್ ಅಂತಿಮವಾಗಿ 256 ರನ್‌ಗಳಿಗೆ ಪೆವಿಲಿಯನ್ ಸೇರಿದರು. ವೀಡಿಯೊ ದೃಶ್ಯಗಳ ಕೊರತೆಯಿಂದಾಗಿ ಈ ಇನ್ನಿಂಗ್ಸ್‌ನ ಶ್ರೇಷ್ಠತೆ ಇಂದಿನ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿಲ್ಲ. ಕ್ರಿಕೆಟ್ ಇತಿಹಾಸಕಾರರಿಗೆ ಮಾತ್ರ ಇಂಥದ್ದೊಂದು ಅಸಾಧಾರಣ ಇನ್ನಿಂಗ್ಸ್‌ನ ಸಂಪೂರ್ಣ ಕಥೆ ಗೊತ್ತಿದೆ.
ಇದನ್ನೂ ಓದಿ:'ಪಾಕ್ ವಿರುದ್ಧ ಭಾರತ ಗೆಲ್ಲಲ್ಲ' ಎಂದಿದ್ದ ಐಐಟಿ ಬಾಬಾ; ಈಗ ಹೇಳುತ್ತಿರುವುದೇನು ಗೊತ್ತಾ?