'ಕಲಿಯುಗದ ವೈಕುಂಠ' ತಿರುಮಲ ತಿರುಪತಿಗೆ ಹೆಜ್ಜೆ ಇಟ್ಟೊಡನೆ ಕೇಳುವ ಪದವೇ ಗೋವಿಂದ. ಭಕ್ತರು ಏಡು ಕುಂಡಲವಾಡ ವೆಂಕಟರಮಣ ಗೋವಿಂದ ಗೋವಿಂದ (ಏಳು ಬೆಟ್ಟಗಳ ಒಡೆಯ, ವೆಂಕಟರಮಣ, ಗೋವಿಂದಾ ಗೋವಿಂದ) ಎಂದು ಜಪಿಸುತ್ತಾ ಶ್ರೀನಿವಾಸನ ದರ್ಶನ ಪಡೆಯುತ್ತಾರೆ. ತಿರುಮಲದ ಸಪ್ತಗಿರಿಗಳಲ್ಲೂ ಗೋವಿಂದನ ನಾಮಸ್ಮರಣೆ ಪ್ರತಿಧ್ವನಿಸುತ್ತದೆ. ಆದರೆ ಅನೇಕ ಭಕ್ತರಿಗೆ ಗೋವಿಂದ ಎಂದು ಯಾಕೆ ಕರೆಯಲಾಗುತ್ತದೆ ಎನ್ನುವುದು ಗೊತ್ತಿಲ್ಲ.
'ಗೋ' + 'ವಿಂದ' ಎಂಬ ಎರಡು ಪದಗಳ ಸಂಯೋಜನೆಯೇ 'ಗೋವಿಂದ'. ಗೋ ಎಂದರೆ ಹಸು ಮತ್ತು ವಿಂದಾ ಎಂದರೆ ಕುರುಬ ಎಂಬರ್ಥವಿದೆ. ಭಾಗವತದಲ್ಲಿ ಗೋ ಎಂದರೆ ಇಂದ್ರಿಯಗಳು ಮತ್ತು ವಿಂದ ಎಂದರೆ ಇಂದ್ರಿಯಗಳಿಗೆ ಆನಂದವನ್ನು ನೀಡುವುದು. ಈ ಎರಡೂ ರೀತಿಯ ಅರ್ಥಗಳನ್ನು ಪರಿಗಣಿಸಿದರೂ ಈ ಹೆಸರು ಶ್ರೀಕೃಷ್ಣನಿಗೆ ತುಂಬಾ ಸೂಕ್ತವಾಗಿದೆ. ಏಕೆಂದರೆ, ಶ್ರೀಕೃಷ್ಣ ಬಾಲ್ಯದಿಂದಲೇ ಗೋಪಾಲಕರು ಹಾಗೂ ಗೋರಕ್ಷಕರ ನಡುವೆ ಬೆಳೆದವನು.
ಗೋವರ್ಧನ ಪರ್ವತ ಎತ್ತಿದ ಶ್ರೀ ಕೃಷ್ಣ: ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಗೋವರ್ಧನ ಪರ್ವತವನ್ನು ಎತ್ತಿರುವುದು ಗೊತ್ತೇ ಇದೆ. ಗೋಕುಲದ ಜನರ ಮೇಲೆ ಕೋಪಗೊಂಡ ಇಂದ್ರ ಗುಡುಗು-ಮಿಂಚುಗಳಿಂದ ಕೂಡಿದ ಧಾರಾಕಾರ ಮಳೆ ಸುರಿಸುತ್ತಾನೆ. ಆ ಮಹಾವಿಪತ್ತಿನಿಂದ ಗೋಕುಲ ಮತ್ತು ಗೋವುಗಳನ್ನು ರಕ್ಷಿಸಲು ಕೃಷ್ಣ ಪರಮಾತ್ಮನು ಗೋವರ್ಧನ ಪರ್ವತವನ್ನೇ ತನ್ನ ಕಿರುಬೆರಳಿನಿಂದ ಎತ್ತಿ ರಕ್ಷಣೆಯಾಗಿ ಹಿಡಿಯುತ್ತಾನೆ. ಆಗ ಹಸುಗಳು ಸೇರಿದಂತೆ ಜನರೆಲ್ಲರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರ್ವತದ ಅಡಿಯಲ್ಲಿ ಹೋಗಿ ನಿಲ್ಲುತ್ತಾರೆ. ಇದರಿಂದ ಗರ್ವಭಂಗವಾದ ಇಂದ್ರನು ಕ್ಷಮೆಯಾಚಿಸಲು ಹೋದಾಗ, ಆ ಸಮಯದಲ್ಲಿ ಗೋಮಾತೆ ಕಾಮಧೇನು ಕೂಡ ಅಲ್ಲಿಗೆ ಬರುತ್ತಾಳೆ.
ಹಸುಗಳನ್ನು ರಕ್ಷಿಸಿದ್ದಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಕಾಮಧೇನು ತನ್ನ ಹಾಲಿನಿಂದ ಕೃಷ್ಣನಿಗೆ ಅಭಿಷೇಕ ಮಾಡುತ್ತಾಳೆ. ಈ ದೃಶ್ಯವನ್ನು ನೋಡಿದ ಇಂದ್ರ ಕೂಡ ತನ್ನ ವಾಹನವಾದ ಐರಾವತನಿಗೂ ಕೃಷ್ಣನಿಗೆ ಗಂಗಾಜಲದಿಂದ ಅಭಿಷೇಕ ಮಾಡಲು ಆದೇಶಿಸುತ್ತಾನೆ. ಶ್ರೀಕೃಷ್ಣನು ಎಲ್ಲಾ ಗೋವುಗಳ ಅಧಿಪತಿ ಎಂದೂ, ಆ ಕ್ಷಣದಿಂದ ಅವನನ್ನು ಗೋವಿಂದ ಎಂದು ಕರೆಯಲಾಗುವುದು ಎಂದೂ ಇಂದ್ರ ಹೇಳಿದಾಗ, ಅಲ್ಲಿದ್ದ ಎಲ್ಲರೂ ಗೋವಿಂದ ಹೆಸರನ್ನು ಸ್ಮರಿಸಿ, ಪೂಜಿಸುತ್ತಾರೆ.
ಅಗಸ್ತ್ಯ ಮುನಿಗಳ ಆಶ್ರಮಕ್ಕೆ ಬಂದ ಭಗವಂತ: ಆದರೆ ಇದರ ಜೊತೆಗೆ ಕಲಿಯುಗದಲ್ಲಿ ಗೋವಿಂದ ಎಂಬ ಹೆಸರಿನ ಹಿಂದೆ ಮತ್ತೊಂದು ಕಥೆಯೂ ಪ್ರಚಲಿತದಲ್ಲಿದೆ. ಒಂದು ಪೌರಾಣಿಕ ಕಥೆಯ ಪ್ರಕಾರ, ಕಲಿಯುಗದ ದೈವಿಕ ಅಭಿವ್ಯಕ್ತಿ ಭಗವಾನ್ ವೆಂಕಟೇಶ್ವರನು ಭೂಮಿಯ ಮೇಲೆ ವಾಸಿಸಲು ತಿರುಪತಿಯಲ್ಲಿರುವ ಸಪ್ತಗಿರಿಯನ್ನು ಆಯ್ಕೆ ಮಾಡಿಕೊಂಡನಂತೆ. ಅಗಸ್ತ್ಯ ಮಹಾಮುನಿಗಳು ಆದಾಗಲೇ ಅಲ್ಲಿ ಒಂದು ಆಶ್ರಮವನ್ನು ಸ್ಥಾಪಿಸಿ ತಪಸ್ಸು ಮಾಡುತ್ತಿದ್ದರು. ಅದನ್ನು ನೋಡಿದ ಭಗವಾನ್ ವೆಂಕಟೇಶ್ವರ, "ಓ ಋಷಿಮುನಿಯೇ ನಾನು ಕಲಿಯುಗದ ಅಧಿಪತಿ, ವೆಂಕಟ ನನ್ನ ಹೆಸರು. ನಾನು ಈ ಸಪ್ತಗಿರಿ ಪರ್ವತದ ಮೇಲೆ ವಾಸಿಸಲು ಬಂದಿದ್ದೇನೆ. ನನಗೆ ಪ್ರತಿದಿನ ಹಾಲು ಕುಡಿಯಲು ಒಂದು ಹಸು ಬೇಕಿತ್ತು" ಎಂದು ವಿನಂತಿ ಮಾಡಿಕೊಳ್ಳುತ್ತಾನೆ.