ಕೀವ್, ಉಕ್ರೇನ್: ಅಮೆರಿಕ ಮತ್ತು ಉಕ್ರೇನ್ ಶುಕ್ರವಾರ ಮಾತುಕತೆಗೆ ತಯಾರಿ ನಡೆಸುತ್ತಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಝೆಲೆನ್ಸ್ಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಬುಧವಾರ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಅಮೆರಿಕದೊಂದಿಗಿನ ಒಪ್ಪಂದ ಅತ್ಯಗತ್ಯ:ಖನಿಜಗಳ ಪಾಲುದಾರಿಕೆ ಒಪ್ಪಂದ, ಉಕ್ರೇನ್‌ಗೆ ಬೆಂಬಲ ಮತ್ತು ಭದ್ರತಾ ಖಾತರಿಗಳಿಗೆ ಸಂಬಂಧಿಸಿದಂತೆ ಸಂಭಾವ್ಯ ಸಭೆಯಲ್ಲಿ ಚರ್ಚೆ ಆಗಲಿವೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಅಮೆರಿಕ ತನ್ನ ನೆರವು ಮುಂದುವರೆಸುವುದು ನನಗೆ ಮತ್ತು ವಿಶ್ವಕ್ಕೆ ಮುಖ್ಯವಾಗಿದೆ. ಶಾಂತಿಯ ಹಾದಿಯಲ್ಲಿ ಶಕ್ತಿ ಅತ್ಯಗತ್ಯ ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ. ಈ ಹಿಂದೆ, ಶುಕ್ರವಾರ (ಫೆಬ್ರವರಿ 28) ಶ್ವೇತಭವನದಲ್ಲಿ ಝೆಲೆನ್ಸ್ಕಿ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ಟ್ರಂಪ್ ಘೋಷಿಸಿದ್ದರು. ಮತ್ತೊಂದು ಕಡೆ ಮೊನ್ನೆ ಮೊನ್ನೆಯಷ್ಟೇ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್- ಟ್ರಂಪ್ ಸಮಾಲೋಚನೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಉಕ್ರೇನ್ ಅಧ್ಯಕ್ಷರು ಶೀಘ್ರ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು.
ಆ ಹೇಳಿಕೆ ಬೆನ್ನಲ್ಲೇ ಝೆಲೆನ್ಸ್ಕಿ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತನಾಡುತ್ತಿದ್ದಾರೆ. ಪ್ರಮುಖವಾಗಿ ರಷ್ಯಾದೊಂದಿಗಿ ಯುದ್ಧ ಕೊನೆಗಾಣಿಸುವಲ್ಲಿ ಈ ಭೇಟಿ ಸಹಕಾರಿ ಆಗಲಿದೆ ಎಂದು ಬಣ್ಣಿಸಲಾಗುತ್ತಿದೆ. ನಮ್ಮ ತಂಡಗಳು ಅಮೆರಿಕದೊಂದಿಗೆ ಕೆಲಸ ಮಾಡುತ್ತಿವೆ. ನಾವು ಈ ಶುಕ್ರವಾರ ಮಾತುಕತೆಗೆ ತಯಾರಿ ನಡೆಸುತ್ತಿದ್ದೇವೆ ಎಂದು ಝೆಲೆನ್ಸ್ಕಿ ತಮ್ಮ ಅಧಿಕೃತ ಟೆಲಿಗ್ರಾಮ್ ಚಾನೆಲ್‌ಗೆ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.