ಗ್ರಾಮಡೊ,ಬ್ರೆಜಿಲ್: ದಕ್ಷಿಣ ಬ್ರೆಜಿಲ್‌ನ ಗ್ರಾಮಡೊ ನಗರದಲ್ಲಿ ಭಾನುವಾರ ಸಣ್ಣ ವಿಮಾನವೊಂದು ನೆಲಕ್ಕೆ ಅಪ್ಪಳಿಸಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ನಿಯಂತ್ರಣ ಕಳೆದುಕೊಂಡ ವಿಮಾನವು ಹಲವಾರು ಕಟ್ಟಡಗಳಿಗೆ ಡಿಕ್ಕಿ ಹೊಡೆದು ವ್ಯಾಪಕ ಹಾನಿಯನ್ನುಂಟು ಮಾಡಿದೆ. ಈ ಘಟನೆಯಲ್ಲಿ 12 ಜನರು ಗಾಯಗೊಂಡಿದ್ದಾರೆ ಎಂದು ಬ್ರೆಜಿಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಕಡೆ ಅಪಘಾತದಲ್ಲಿ ಕನಿಷ್ಠ 17 ಜನರು ಗಾಯಗೊಂಡಿದ್ದಾರೆ ಎಂದು ರಿಯೊ ಗ್ರಾಂಡೆ ಡೊ ಸುಲ್‌ನ ಸಿವಿಲ್ ಡಿಫೆನ್ಸ್ ದೃಢಪಡಿಸಿದೆ. ಘರ್ಷಣೆಯಿಂದ ಉಂಟಾದ ಬೆಂಕಿಯಿಂದಾಗಿ ಅನೇಕರು ಉಸಿರಾಟದ ಸಮಸ್ಯೆಯಿಂದ ಬಳಲಿದರು ಎಂದು ವರದಿಯಾಗಿದೆ. ವಿಮಾನ ಕಟ್ಟಡಗಳಿಗೆ ಅಪ್ಪಳಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿರುವ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ವಿಮಾನವು ಸ್ಥಳೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತ ಸಂಭವಿಸಿದೆ ಎಂದು ರಾಷ್ಟ್ರೀಯ ಸಿವಿಲ್ ಡಿಫೆನ್ಸ್ ಹೇಳಿದೆ. ವಿಮಾನವು ವಸತಿ ಗೃಹಕ್ಕೆ ಅಪ್ಪಳಿಸುವ ಮೊದಲು ಕಟ್ಟಡದ ಚಿಮಣಿಗೆ ಡಿಕ್ಕಿ ಹೊಡೆದು ನಂತರ ಪೀಠೋಪಕರಣ ಅಂಗಡಿಗೆ ಅಪ್ಪಳಿಸಿತು. ಅಪಘಾತದ ಅವಶೇಷಗಳು ಸಹ ಹೋಟೆಲ್ ಅಪ್ಪಳಿಸಿವೆ ಎಂದು ಮಾಧ್ಯಮ ವರದಿ ಮಾಡಿದೆ.