ಬನ್ಸ್ಕಾ ಬೈಸ್ಟ್ರಿಕಾ: ಸ್ಲೋವಾಕಿಯಾ ದೇಶದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಅಪರಿಚಿತನೋರ್ವ ಗುಂಡು ಹಾರಿಸಿ ಹತ್ಯೆಗೆ ಪ್ರಯತ್ನಿಸಿರುವ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಫಿಕೊ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.
ಘಟನೆಯ ವಿವರ:ಸ್ಲೋವಾಕಿಯಾರಾಜಧಾನಿ ಬ್ರಾಟಿಸ್ಲಾವಾದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ ಪ್ರಧಾನಿ ಫಿಕೊ ಬುಧವಾರ ಮಧ್ಯಾಹ್ನ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಈ ಸಭೆಯ ಬಳಿಕ ಹೊರಬಂದ ಅವರು ನೆರೆದಿದ್ದ ಕಾರ್ಯಕರ್ತರನ್ನು ಮಾತನಾಡಿಸಲು ತೆರಳಿದ್ದಾರೆ. ಈ ವೇಳೆ ಅಲ್ಲಿದ್ದ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಬಂದೂಕಿನಿಂದ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಫಿಕೋ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಭದ್ರತಾ ಸಿಬ್ಬಂದಿ ಕಾರಿನ ಮೂಲಕ ಬನ್ಸ್ಕಾ ಬೈಸ್ಟ್ರಿಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಲೋವಾಕಿಯ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಅವರು ಪ್ರಧಾನಿ ಹತ್ಯೆ ಯತ್ನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಂಸತ್ ಚುನಾವಣೆಗೆ 3 ವಾರ ಮೊದಲು ಸ್ಲೋವಾಕಿಯಾದಲ್ಲಿ ನಡೆದ ಈ ಘಟನೆ ಅಲ್ಲಿಯ ಜನರನ್ನು ಆತಂಕಕ್ಕೀಡು ಮಾಡಿದೆ. ದಾಳಿಯನ್ನು ದೇಶದ ಪ್ರತಿಪಕ್ಷಗಳೂ ಖಂಡಿಸಿವೆ.