ಪಪುವಾ ನ್ಯೂಗಿನಿ:ಪಪುವಾ ನ್ಯೂ ಗಿನಿಯಾದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಪ್ರಮಾಣದ ಭೂಕುಸಿತದಲ್ಲಿ ಕನಿಷ್ಠ 2,000 ಜನರು ಜೀವಂತ ಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂ ಗಿನಿಯಾದ ರಾಷ್ಟ್ರೀಯ ವಿಪತ್ತು ಕೇಂದ್ರದ ವರದಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಇದುವರೆಗೆ ಕೇವಲ ಆರು ಮಂದಿಯ ಅವಶೇಷಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಬದುಕುಳಿದವರ ರಕ್ಷಣೆಗೆ ಹರಸಾಹಸವೇ ನಡೆಯುತ್ತಿದೆ. ಪಪುವಾ ನ್ಯೂ ಗಿನಿಯಾದ ಉತ್ತರ ಭಾಗದಲ್ಲಿರುವ ಪರ್ವತ ಪ್ರದೇಶ ಎಂಗಾ ಪ್ರದೇಶದಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಮೊದಲು 100 ಜನರು ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಆ ಬಳಿಕ ಸಾವಿನ ಸಂಖ್ಯೆಯನ್ನು 670 ಎಂದು ಅಂದಾಜಿಸಲಾಗಿತ್ತು. ಇದೀಗ ಈ ಸಂಖ್ಯೆ 2,000 ತಲುಪಿದೆ.
"ಭೂಕುಸಿತ ಕನಿಷ್ಠ 2,000 ಜನರನ್ನು ಜೀವಂತವಾಗಿ ಸಮಾಧಿ ಮಾಡಿದೆ. ಅನೇಕ ಕಟ್ಟಡಗಳು, ಕೃಷಿ ಭೂಮಿಗಳು ನಾಶಗೊಂಡಿವೆ. ದೇಶದ ಆರ್ಥಿಕ ಜೀವನಾಧಾರದ ಮೇಲೆ ಪ್ರಾಕೃತಿಕ ವಿಕೋಪ ದೊಡ್ಡ ಪರಿಣಾಮ ಬೀರಿದೆ" ಎಂದು ರಾಷ್ಟ್ರೀಯ ವಿಪತ್ತು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಲುಸೆಟೆ ಲಾಸೊ ಮನ ಅವರು ಯುಎನ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.