Test Necessary before marriage:ಮದುವೆಯು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ್ದು ಹಾಗೂ ಸಂತೋಷದ ಕ್ಷಣಗಳಿಂದ ಕೂಡಿರುತ್ತದೆ. ವಿವಾಹದ ಸಂಬಂಧದಲ್ಲಿ ಯಾವಾಗಲೂ ಮಧುರತೆ ಇರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಹಾಗಾದ್ರೆ, ಮದುವೆಗೆ ಮುನ್ನ ನಾವು ಜಾತಕ ನೋಡುವುದು, ಮದುವೆಯ ಆಹಾರ ಮೆನು ಮತ್ತು ಬಟ್ಟೆ ಶಾಪಿಂಗ್ ಬಗ್ಗೆ ಹೆಚ್ಚು ಗಮನ ಹರಿಸುತ್ತೇವೆ. ಈ ಭರಾಟೆಗಳಲ್ಲಿ ನಾವು ನಮ್ಮ ಜೀವನದ ಪ್ರಮುಖ ವಿಷಯಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತೇವೆ. ಇದರ ಪರಿಣಾಮವಾಗಿ, ಹಲವು ದಂಪತಿಗಳು ಒಂದಿಲ್ಲೊಂದು ಕಾರಣಕ್ಕಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಎರಡು ಜೀವಗಳಷ್ಟೇ ಅಲ್ಲ, ಇಬ್ಬರ ಕುಟುಂಬಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಮದುವೆಗೆ ಮೊದಲು ಕೆಲವು ಪರೀಕ್ಷೆಗೆ ಒಳಗಾಗುವುದರಿಂದ ಲೈಂಗಿಕವಾಗಿ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆನುವಂಶಿಕ ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದಂತಹ ಕಾಯಿಲೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ವಿವಾಹಕ್ಕೂ ಮೊದಲು ದಂಪತಿಗಳು ಇಲ್ಲಿ ನೀಡಲಾದ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಹೆಚ್ಐವಿ ಪರೀಕ್ಷೆ:ಮದುವೆಗೂ ಮುನ್ನ ದಂಪತಿಗಳು ಹೆಚ್‌ಐವಿ ಪರೀಕ್ಷೆಯನ್ನು ಮಾಡಿಸಲೇಬೇಕಾಗುತ್ತದೆ. ಒಂದು ವೇಳೆ ಹೆಚ್ಐವಿ ಸೋಂಕು ತಗುಲಿದ್ದರೆ, ಮದುವೆಯ ನಂತರ ಇಬ್ಬರ ಜೀವನವೂ ತೊಂದರೆಗೆ ಸಿಲುಕುತ್ತದೆ. ಇದರಿಂದಾಗಿ ಮದುವೆಗೂ ಮುನ್ನ ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯವಾಗಿದೆ. ಯಾವುದೇ ಮುಜುಗರವಿಲ್ಲದೆ ಇದನ್ನು ಮಾಡಿಸಿಕೊಳ್ಳಬೇಕು ಎಂದು ವೈದ್ಯರು ತಿಳಿಸುತ್ತಾರೆ.
ಎಸ್ಟಿಡಿ ಪರೀಕ್ಷೆ:ದಂಪತಿಗಳು ಮದುವೆಗೆ ಮೊದಲು ಎಸ್ಟಿಡಿ ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ. ಇದರಿಂದ ಲೈಂಗಿಕವಾಗಿ ಹರಡುವ ರೋಗಗಳು ಹರಡುವ ಸಾಧ್ಯತೆ ಕಡಿಮೆ ಇರುತ್ತದೆ. ಇಬ್ಬರಲ್ಲಿ ಒಬ್ಬರು ಮದುವೆಗೆ ಮೊದಲು ಲೈಂಗಿಕ ಸಮಸ್ಯೆಗಳನ್ನು ಹೊಂದಿದ್ದರೆ, ಮದುವೆಯ ನಂತರ, ಲೈಂಗಿಕವಾಗಿ ಹರಡುವ ರೋಗಗಳು ತೀವ್ರ ಸ್ವರೂಪ ಪಡೆದುಕೊಳ್ಳಬಹುದು. ಇದರಿಂದ ಈ ಸಮಸ್ಯೆಯನ್ನು ತಪ್ಪಿಸಲು STD ಪರೀಕ್ಷೆಯನ್ನು ಮಾಡಿಸಬೇಕಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ವಂಶವಾಹಿ ಪರೀಕ್ಷೆ:ಮದುವೆಗೂ ಮುನ್ನ ಎಲ್ಲರೂ ವಂಶವಾಹಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಯಿಂದ ನೀವು ನಿಮ್ಮ ಮಕ್ಕಳನ್ನು ಕೆಲವು ಆನುವಂಶಿಕವಾಗಿ ಕಾಡುವ ಹಲವು ಸಮಸ್ಯೆಗಳನ್ನು ಅಪಾಯದಿಂದ ರಕ್ಷಿಸಬಹುದು. ಅಲ್ಲದೆ, ಈ ಪರೀಕ್ಷೆಯು ಭವಿಷ್ಯದಲ್ಲಿ ನಿಮ್ಮ ಮಕ್ಕಳಿಗೆ ಆನುವಂಶಿಕ ಕಾಯಿಲೆಗಳನ್ನು ತಡೆಯಲು ಈ ಪರೀಕ್ಷೆಯ ಮಾಹಿತಿ ಮುಖ್ಯವಾಗಿದೆ. ಈ ಪರೀಕ್ಷೆ ಮಾಡುವುದರಿಂದ ರೋಗ ಪತ್ತೆಯಾದರೆ ಶೀಘ್ರ ಚಿಕಿತ್ಸೆ ಪಡೆಯಬಹುದು. ಜೊತೆಗೆ ನಿಮ್ಮ ಸಂಗಾತಿ ಯಾವ ಆನುವಂಶಿಕ ಕಾಯಿಲೆಗಳಿಗೆ ಗುರಿಯಾಗುತ್ತಾರೆ ಎಂಬುದನ್ನು ಕಂಡುಹಿಡಿಯಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಥಲಸ್ಸೆಮಿಯಾ:ಥಲಸ್ಸೆಮಿಯಾ ಒಂದು ರಕ್ತದ ಕಾಯಿಲೆಯಾಗಿದೆ. ಪತಿ-ಪತ್ನಿಯರಿಬ್ಬರಿಗೂ ಈ ಕಾಯಿಲೆ ಇದ್ದರೆ, ಭವಿಷ್ಯದಲ್ಲಿ ಮಕ್ಕಳಿಗೂ ಬರುವ ಸಾಧ್ಯತೆಯಿರುತ್ತದೆ. ಮಕ್ಕಳಿಗೆ ಈ ಕಾಯಿಲೆ ಬಂದರೆ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ಥಲಸ್ಸೆಮಿಯಾ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.