ರಿಷಿಕೇಶ(ಉತ್ತರಾಖಂಡ):ಏಮ್ಸ್ ರಿಷಿಕೇಶ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಇದೀಗ ಇಲ್ಲಿನ ವೈದ್ಯರು 35 ವರ್ಷದ ಯಕೃತ್ ಕ್ಯಾನ್ಸರ್ನಿಂದ ಬಳಲುತ್ತಿರುವ ರೋಗಿಗೆ ರೊಬೊಟಿಕ್ ತಂತ್ರಜ್ಞಾನ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಏಮ್ಸ್ ರಿಷಿಕೇಶ್‌ನಿಂದ ನೀಡಿರುವ ಮಾಹಿತಿಯ ಪ್ರಕಾರ, ರುದ್ರಪ್ರಯಾಗ ಜಿಲ್ಲೆಯ ದರ್ಮೋಲಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ (34) ಎಂಬವರು ಕಳೆದ ಮೂರು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದರು. ನಂತರ ಅವರು ಚಿಕಿತ್ಸೆಗಾಗಿ ಏಮ್ಸ್ ವೈದ್ಯರನ್ನು ಸಂಪರ್ಕಿಸಿದ್ದರು.
ಈ ಬಗ್ಗೆ ಏಮ್ಸ್ ರಿಷಿಕೇಶದ ಏಮ್ಸ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುನೀತಾ ಸುಮನ್ ಮಾತನಾಡಿ, "ಒಪಿಡಿ ಮೂಲಕ ನಡೆಸಿದ ವಿವಿಧ ಪರೀಕ್ಷೆಗಳ ಆಧಾರದ ಮೇಲೆ ರೋಗಿ 'ಲಿವರ್ ಮ್ಯಾಲಿಗ್ನೆಂಟ್ ಮೆಸೆಂಚೈಮಲ್ ಟ್ಯೂಮರ್' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಕಂಡುಬಂದಿತ್ತು. ಇಂಥ ಕ್ಯಾನ್ಸರ್ ಅಪಾಯಕಾರಿ ಮಟ್ಟ ತಲುಪಿತ್ತು. ಇದು ಮಾರಣಾಂತಿಕವಾಗಿದ್ದು, ಯಕೃತ್‌ನಲ್ಲಿ ಗಡ್ಡೆಗಳು ರೂಪುಗೊಳ್ಳುತ್ತವೆ. ರೋಗದ ಗಂಭೀರತೆ ಕಂಡ ಹಿರಿಯ ಶಸ್ತ್ರಚಿಕಿತ್ಸಕ ಹಾಗೂ ವಿಭಾಗದ ಮುಖ್ಯಸ್ಥ ಡಾ.ನಿರ್ಜರ್ ರಾಜ್ ರೋಗಿಗೆ ಶೀಘ್ರ ಉಪಶಮನ ನೀಡಲು ಯಕೃತ್ ಛೇದನ ಶಸ್ತ್ರಚಿಕಿತ್ಸೆ ಅಗತ್ಯ ಎಂದು ನಿರ್ಧರಿಸಿದರು. ನಂತರ ರೋಬೋಟಿಕ್ ಸಹಾಯದಿಂದ ರೋಗಿಯ ಯಕೃತ್ತಿನ ಸುಮಾರು ಶೇ 35 ರಷ್ಟು ಭಾಗವನ್ನು ಎಚ್ಚರಿಕೆಯಿಂದ ತೆಗೆದುಹಾಕಲಾಯಿತು" ಎಂದು ವಿವರಿಸಿದರು.
ಶಸ್ತ್ರಚಿಕಿತ್ಸೆ ನಡೆಸಿದ ತಂಡದ ಮತ್ತೋರ್ವ ಸದಸ್ಯ ಹಾಗೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಲೋಕೇಶ್ ಅರೋರಾ ಮಾತನಾಡಿ, "ಪ್ರಮುಖ ರಕ್ತನಾಳಗಳು ಹತ್ತಿರವಿರುವುದರಿಂದ ಯಕೃತ್ ಛೇದನ ಶಸ್ತ್ರಕ್ರಿಯೆಯಲ್ಲಿ ಅಗತ್ಯ ನಿಖರತೆ ಕುರಿತು ವಿವರಿಸಿ, ಶಸ್ತ್ರಚಿಕಿತ್ಸೆಯಿಂದ ಇದನ್ನು ಸಾಧಿಸಬಹುದಾಗಿದೆ. ರೊಬೊಟಿಕ್ ತಂತ್ರಜ್ಞಾನದಿಂದ ಹತ್ತಿರದ ಅಂಗಗಳಿಗೆ ಹಾನಿಯಾಗುವ ಅಪಾಯ ತುಂಬಾ ಕಡಿಮೆ. ಈ ಶಸ್ತ್ರಚಿಕಿತ್ಸೆ ತುಂಬಾ ಕಷ್ಟಕರವಾಗಿತ್ತು. ಆದರೆ ತಂಡವಾಗಿ ಕೆಲಸ ಮಾಡಿ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿದೆ" ಎಂದು ಹೇಳಿದರು.