ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಕಳೆದ ರಾತ್ರಿ ತನ್ನ ವಿಜೇತನನ್ನು ಘೋಷಿಸಿದೆ. ಸೀಸನ್ 11ರ ವಿಜೇತರಾಗಿ ಹನುಮಂತು ಹೊರಹೊಮ್ಮಿದ್ದಾರೆ. ಒಂದೊಳ್ಳೆ ವ್ಯಕ್ತಿತ್ವ ಗೆಲುವು ಕಂಡ ಖುಷಿ ಜೊತೆಗೆ ಇದು ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬಂದ ಕೊನೆ ಸೀಸನ್ ಎಂಬ ನೋವು ಅಭಿಮಾನಿಗಳಲ್ಲಿದೆ.
ಕಿಚ್ಚನ ನಿರ್ಧಾರ ಬದಲಾಗುತ್ತಾ?ಹೌದು, ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ಸುದೀಪ್ ಇದು ನನ್ನ ನಿರೂಪಣೆಯಲ್ಲಿ ಬರುವ ಕೊನೆ ಸೀಸನ್ ಎಂದು ಎಂದು 11ನೇ ಸೀಸನ್ನ ಆರಂಭದಲ್ಲೇ ತಿಳಿಸಿದ್ದರು. ಪ್ರತೀ ವೀಕೆಂಡ್ ಸ್ಪರ್ಧಿಗಳ ಜೊತೆ ಚರ್ಚೆ ನಡೆಸುವಾಗ ಗಂಟೆಗಟ್ಟಲೆ ನಿಂತೇ ಮಾತನಾಡುತ್ತಿದ್ದ ಸುದೀಪ್ ಅವರನ್ನು ಇನ್ಮುಂದೆ ಕೋಟ್ಯಂತರ ಕನ್ನಡಿಗರು ಮಿಸ್ ಮಾಡಿಕೊಳ್ಳಲಿದ್ದಾರೆ. ಸುದೀಪ್ ಅವರು ಈಗಾಗಲೇ ಅಧಿಕೃತವಾಗಿ ತಿಳಿಸಿರುವಂತೆ ಇದು ಅವರ ಕೊನೆ ಬಿಗ್ ಬಾಸ್ ಆಗಲಿದೆಯೇ? ಅಥವಾ ಅಭಿಮಾನಿಗಳಿಗಾಗಿ ನಿರ್ಧಾರ ಬದಲಿಸಿಕೊಳ್ಳಲಿದ್ದಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.
ಈ ಹಿಂದೆ ಹರಡಿತ್ತು ವದಂತಿ: ಬಿಗ್ ಬಾಸ್ ಸೀಸನ್ 11ರ ಘೋಷಣೆಗೂ ಕೆಲ ದಿನಗಳ ಮುನ್ನ ವದಂತಿಯೊಂದು ಹರಡಿತ್ತು. ಇನ್ಮುಂದೆ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದಾಗ್ಯೂ, ಈ ಸೀಸನ್ ಅನ್ನು ಸುದೀಪ್ ಅವರೇ ನಡೆಸಿಕೊಡಲು ಮುಂದಾದರು. ಇದು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಖುಷಿ ತರಿಸಿತ್ತು.
ಯಾರ ಹೆಸರು ಕೇಳಿಬಂದಿತ್ತು?ಸುದೀಪ್ ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡಲ್ಲ ಎಂಬ ವದಂತಿ ಹರಡಿದ ಬೆನ್ನಲ್ಲೇ, ಸೀಸನ್ 11 ಅನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಸೀಸನ್ನ ನಿರೂಪಕನಾಗಬಹುದು ಎಂಬ ಊಹಿಸಲಾಗಿತ್ತು. ಕಾಂತಾರ ಸ್ಟಾರ್ನ ಹೆಸರು ಕೆಲ ದಿನಗಳ ಕಾಲ ಬಿಗ್ ಬಾಸ್ ಜೊತೆ ಕೇಳಿಬಂದಿತ್ತು. ಫೈನಲಿ, ಸೀಸನ್ 11 ಅಧಿಕೃತವಾಗಿ ಘೋಷಣೆಗೊಂಡು, ಸುದೀಪ್ ಅವರೇ ನಿರೂಪಕ ಎಂಬುದು ಸ್ಪಷ್ಟವಾಯಿತು.