ಬೆಂಗಳೂರು: ಉಪೇಂದ್ರ ಅಭಿನಯಿಸಿ, ನಿರ್ದೇಶಿಸಿರುವ 'ಯುಐ' ಚಿತ್ರ ಇಂದು ತೆರೆಕಂಡಿದೆ. ನಗರದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ರಿಯಲ್ ಸ್ಟಾರ್ ಅಭಿಮಾನಿಗಳು ನಟನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಂಭ್ರಮಿಸಿದ್ದಾರೆ.
ಚಲನಚಿತ್ರ ವೀಕ್ಷಿಸಿ ಈಟಿವಿ ಭಾರತದ ಜೊತೆ ಮಾತನಾಡಿದ ರಿಯಲ್ ಸ್ಟಾರ್ ಅಭಿಮಾನಿಯಾದ ನಟ-ನಿರೂಪಕ ಸುಶಾನ್ ಶೆಟ್ಟಿ, "ವಿಚಾರವನ್ನು ವಿಚಾರವನ್ನಾಗಿ ತೆಗೆದುಕೊಳ್ಳಬೇಕು. ಕಟ್, ಪೇಸ್ಟ್, ಕ್ರಾಪ್ ಆಗಬಾರದು ಅನ್ನೋದು ಯುಐ ಚಿತ್ರದ ಸಂದೇಶ. ಚಿತ್ರ ನೋಡುವ ಪ್ರತಿಯೊಬ್ಬರೂ ಹೆಮ್ಮೆಯಿಂದ ಹೊರಬರುತ್ತಿದ್ದಾರೆ. ಚಿತ್ರ ಮತ್ತು ಚಿತ್ರನಟನ ಉದ್ದೇಶ ಮುಖ್ಯ ಎನ್ನುವುದನ್ನು ಚಿತ್ರ ಸಾರಿ ಹೇಳುತ್ತದೆ" ಎಂದರು.
"ಇದು ಯೂನಿವರ್ಸಲ್ ಇಂಟೆಲಿಜೆನ್ಸ್ ಸಿನಿಮಾ. ಕೇವಲ ಕನ್ನಡದ, ದೇಶದ ಸಿನಿಮಾ ಆಗಿರದೇ ಇಡೀ ಜಗತ್ತಿಗೆ ಮತ್ತು ಅದರ ಹೊರತಾಗಿ ಜಗತ್ತಿದ್ದರೂ ಅದಕ್ಕೂ ಅನ್ವಯಿಸುವ ಸಿನಿಮಾ. ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ. ಕಲಿಯುಗದಲ್ಲಿ ಮಾಡಿದ ಕರ್ಮವನ್ನು ಇಲ್ಲಿಯೇ ಅನುಭವಿಸಿ ಹೋಗಬೇಕು ಎನ್ನುವ ಸಂದೇಶವನ್ನು ಸಿನಿಮಾ ನೀಡುತ್ತಿದೆ. ಕಲ್ಕಿ ಮತ್ತು ಸತ್ಯನ ಎರಡೂ ಪಾತ್ರಗಳಲ್ಲಿ ಉಪೇಂದ್ರ ತುಂಬಾ ಚೆನ್ನಾಗಿ ನಟಿಸಿದ್ದಾರೆ" ಎಂದು ತಿಳಿಸಿದರು.
"ಯುಐ ನೋಡುತ್ತಾ ಪ್ರಸ್ತುತವಾದ ಡೈಲಾಗ್ ತುಂಬಾ ಮನಸ್ಸಿಗೆ ನಾಟುತ್ತದೆ. ಹಣ್ಣು ಕಚ್ಚಿದರೆ ಹೆಣ್ಣು ಬಿಚ್ಚಿದರೆ ಬೆಲೆ ಇಲ್ಲ ಎನ್ನುವುದು ಆ ಡೈಲಾಗ್ ಆಗಿದೆ. ಕೆಲವು ಹೆಣ್ಣು ಮಕ್ಕಳಿಗೆ ಈಗಿನ ಸೋಶಿಯಲ್ ಮೀಡಿಯಾದಲ್ಲಿ ಬಟ್ಟೆ ಬಿಚ್ಚಿದರೆ ಮಾತ್ರ ನಾವು ತುಂಬಾ ಹೆಚ್ಚು ಪ್ರಚಾರ ಪಡೆಯುತ್ತೇವೆ ಎನ್ನುವ ಮನೋಭಾವ ಬಂದಿದೆ. ಆದರೆ ಈ ಚಿತ್ರದ ಸಂದೇಶದಂತೆ ನಮ್ಮ ಕರುನಾಡ ದೇಶದ ಹೆಣ್ಣು ಮಕ್ಕಳು ನಡೆದರೆ ಉತ್ತಮ ಭವಿಷ್ಯ ಅವರದ್ದಾಗುತ್ತದೆ" ಎಂದು ಅಭಿಪ್ರಾಯಪಟ್ಟರು.