ಚಿತ್ರವೊಂದರ ಶೀರ್ಷಿಕೆ ಸಿನಿಪ್ರೇಮಿಗಳಿಗೆ ಸಿಗುವ ಮೊದಲ ಆಮಂತ್ರಣ. ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಕೆಲಸವನ್ನು ಮೊದಲು ಟೈಟಲ್ಗಳು ಮಾಡುತ್ತವೆ. ಅದರಂತೆ, ಕನ್ನಡ ಚಿತ್ರರಂಗದಲ್ಲೀಗ ಗಮನ ಸೆಳೆದಿರುವ ಸಿನಿಮಾ 'ಪ್ರಕರಣ ತನಿಖಾ ಹಂತದಲ್ಲಿದೆ'. ಹೆಸರು ಹೇಳಿದ ಕೂಡಲೇ ಏನಿದು ಪ್ರಕರಣ? ಯಾವ ತನಿಖೆ ಬಗ್ಗೆ ಹೇಳಲಿದೆ? ಅನ್ನೋ ಕುತೂಹಲ ಕೇಳುಗರಲ್ಲಿ ಮೂಡೋದು ಸಹಜ.
ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥಾನಕದ ಸುಳಿವು ಬಿಟ್ಟು ಕೊಟ್ಟಿದ್ದ 'ಪ್ರಕರಣ ತನಿಖಾ ಹಂತದಲ್ಲಿದೆ' ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರೀಗ ಸಂಪೂರ್ಣ ಸಿನಿಮಾ ವೀಕ್ಷಿಸುವ ಕಾತರದಲ್ಲಿದ್ದಾರೆ. ಇಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ.
ಹೊಸತೇನನ್ನೋ ಸೃಷ್ಟಿಸಬೇಕೆಂಬ ತುಡಿತದೊಂದಿಗೆ ತಯಾರಾಗಿರುವ ಈ ಚಿತ್ರ ಈಗಾಗಲೇ ಟೈಟಲ್ ಟ್ರ್ಯಾಕ್, ಪೋಸ್ಟರ್, ಟ್ರೇಲರ್ ಮುಂತಾದವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆಯೇ ಇದೊಂದು ಕ್ರೈಂ ಜಾನರಿನ ಚಿತ್ರವೆಂಬಂಬುದನ್ನು ಸೂಚಿಸುವುದು ಸತ್ಯ. ಆದರೆ, ಅದೆಲ್ಲದರಾಚೆಗಿನ ಬೆರಗುಗಳನ್ನು 95 ನಿಮಿಷಗಳ ಈ ಥ್ರಿಲ್ಲರ್ ಸಿನಿಮಾ ಬಚ್ಚಿಟ್ಟುಕೊಂಡಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.
ಮಹೀನ್ ಕುಬೇರ್ 'ಪ್ರಕರಣ ತನಿಖಾ ಹಂತದಲ್ಲಿದೆ' ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್ ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಸೇರಿದಂತೆ ಮೊದಲಾದವರ ತಾರಾಗಣವಿದೆ.