ಕನ್ನಡ ಚಿತ್ರರಂಗದ ಕರಾಟೆ ಕಿಂಗ್ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ್ದ ನಟ ಶಂಕರ್ ನಾಗ್ ನಮ್ಮೊಂದಿಗಿದ್ದಿದ್ದರೆ ಇಂದು ಅಭಿಮಾನಿಗಳೊಂದಿಗೆ 70ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕರ್ನಾಟಕದಲ್ಲಿ ಶಂಕರ್ ನಾಗ್ ಜನ್ಮದಿನ ಚಾಲಕರ ದಿನಾಚರಣೆ ಎಂದೇ ಪ್ರಸಿದ್ಧಿ. ಬಸವೇಶ್ವರ ನಗರದ ಸುಮಾರು 200ಕ್ಕೂ ಹೆಚ್ಚು ಆಟೋ ಚಾಲಕರು 'ಮರ್ಯಾದೆ ಪ್ರಶ್ನೆ' ಚಿತ್ರತಂಡದೊಂದಿಗೆ ಚಾಲಕರ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಮರ್ಯಾದೆ ಪ್ರಶ್ನೆ ಚಿತ್ರತಂಡದ ಜೊತೆಗೆ ನಮ್ಮ ಯಾತ್ರಿ ಆ್ಯಪ್ನ ರಾಜೀವ್ ಕೂಡಾ ಭಾಗವಹಿಸಿದ್ದರು. ನಮ್ಮ ಯಾತ್ರಿ ಕನ್ನಡದ ಚಾಲಕರಿಗೆ ಸಹಾಯ ಮಾಡಲು ಶುರುವಾದ ಆ್ಯಪ್. ಕನ್ನಡಿಗರ ಜೊತೆ ನಿಲ್ಲುವುದು ನಮ್ಮಉದ್ದೇಶ. ಅದೇ ಉದ್ದೇಶದಿಂದ ಚಾಲಕರ ಪಾತ್ರ ಇರುವ 'ಮರ್ಯಾದೆ ಪ್ರಶ್ನೆ' ಸಿನಿಮಾ ತಂಡದ ಜತೆ ನಿಂತಿದ್ದೇವೆ ಎಂದು ರಾಜೀವ್ ತಿಳಿಸಿದರು.
ಆರ್ ಜೆ ಪ್ರದೀಪಾ ಸಕ್ಕತ್ ಸ್ಟುಡಿಯೋವನ್ನು 2017ರಲ್ಲಿ ಶಂಕರ್ ನಾಗ್ ಅವರ ಜನ್ಮದಿನದಂದು ಆರಂಭಿಸಿದರು. ಎಂಟು ವರ್ಷಗಳ ಹಿಂದೆ ಶುರುವಾದ ಸಂಸ್ಥೆ ಇಂದು ತಮ್ಮದೇ ಒಂದು ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದಿದೆ. ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ 'ಮರ್ಯಾದೆ ಪ್ರಶ್ನೆ' ಸಕ್ಕತ್ ಸ್ಟುಡಿಯೋದ ಮೊದಲ ಚಿತ್ರ.
ಚಿತ್ರದಲ್ಲಿ 'ಡ್ರೈವರ್' ಪಾತ್ರ ನಿರ್ವಹಿಸಿರುವ ಪೂರ್ಣಚಂದ್ರ ಮೈಸೂರು ಅವರಿಗೆ ಖಾಕಿ ಕೋಟ್ ಹಾಕುವ ಮೂಲಕ ಆಟೋ ಚಾಲಕರು ಸಾಂಕೇತಿಕವಾಗಿ ಪೂರ್ಣ ಅವರನ್ನು ಚಾಲಕರ ಬಳಗಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮರ್ಯಾದೆ ಪ್ರಶ್ನೆ ಚಿತ್ರದ ಆಟೋ ಸ್ಟಿಕ್ಕರ್ಸ್ ಹಾಕುವುದನ್ನು ಶುರು ಮಾಡಲಾಯಿತು.
ಪೂರ್ಣಚಂದ್ರ ಮೈಸೂರು ಮಾತನಾಡಿ, ''ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ನಿರ್ವಹಿಸಿದ್ದೇನೆ. ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. ಮಿಡಲ್ ಕ್ಲಾಸ್ ಜೀವನದ ಕತೆ ಹೊಂದಿರುವ ಚಿತ್ರ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುವ ನಂಬಿಕೆಯಿದೆ" ಎಂದರು.