ತೆಲುಗಿನ ಸೂಪರ್ ಸ್ಟಾರ್ ಮೋಹನ್ ಬಾಬು ಅವರ ಪುತ್ರಿ ಲಕ್ಷ್ಮೀ ಮಂಚು ''ಆದಿಪರ್ವ'' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ನಿರ್ಮಾಣವಾಗಿರುವ "ಆದಿಪರ್ವ" ಚಿತ್ರವನ್ನು ಸಂಜೀವ್ ಕುಮಾರ್ ಮೆಗೋಟಿ ನಿರ್ದೇಶಿಸಿದ್ದಾರೆ.
ರವಿ ಕಿರಣ್ ನಿರ್ದೇಶನದ "ಬದುಕು" ಚಿತ್ರಕ್ಕೆ ಚಿತ್ರಕಥೆ - ಸಂಭಾಷಣೆ ಬರೆಯೋ ಮೂಲಕ ಕನ್ನಡಿಗರಿಗೆ ಪರಿಚಯರಾದ ಸಂಜೀವ್ ಕುಮಾರ್ ಮೆಗೋಟಿ, ಪೂಜಾ ಗಾಂಧಿ ಅಭಿನಯದ "ಆಪ್ತ", "ದಂಡು", "ಕ್ಯೂ" ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕಳೆದ 8 ವರ್ಷಗಳಲ್ಲಿ ತೆಲುಗು ಮತ್ತು ಕನ್ನಡ ಸೇರಿದಂತೆ ಅನೇಕ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ - ಚಿತ್ರ ಕಥೆಯನ್ನು ನೀಡುವುದರ ಜೊತೆಗೆ, ತಮ್ಮದೇ ಬ್ಯಾನರ್ ಅಡಿಯಲ್ಲಿ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಬಹಳ ದಿನಗಳ ನಂತರ ಹಿರಿತೆರೆಗೆ ಮರಳಿದ್ದಾರೆ.
ಲಕ್ಷ್ಮೀ ಮಂಚು, ಎಸ್ತರ್, ಸತ್ಯಪ್ರಕಾಶ್ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ, ಮರಾಠಿ ಮತ್ತು ಹಿಂದಿ ಚಿತ್ರರಂಗದ ಕಲಾವಿದರು ಈ 'ಆದಿಪರ್ವ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದವರಾದ ಹರೀಶ್ ಅವರ ಛಾಯಗ್ರಹಣವಿರುವ ಆದಿಪರ್ವ ಚಿತ್ರಕ್ಕೆ ರಾಮ್ ಸುಧಿ (ಸುಧೀಂದ್ರ) ಸಂಭಾಷಣೆ ಮತ್ತು ಸಾಹಿತ್ಯ ರಚಿಸಿದ್ದಾರೆ.