ಹೈದರಾಬಾದ್: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು ಎಂಬ ಆರೋಪ ಭಾರಿ ಸಂಚಲನ ಸೃಷ್ಟಿಸಿದೆ. ಆಕ್ರೋಶ, ಆರೋಪ - ಪ್ರತ್ಯಾರೋಪಗಳು ಮುಂದುವರಿದಿವೆ. ಈ ಮಧ್ಯೆ ಜನಪ್ರಿಯ ನಟ ಕಾರ್ತಿ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ.
ಹೌದು, ನಟ ಕಾರ್ತಿ ಇತ್ತೀಚೆಗೆ ತಿರುಪತಿ ಲಡ್ಡು ವಿಚಾರವನ್ನು 'ಸೂಕ್ಷ್ಮ' ವಿಷಯ ಎಂದು ಉಲ್ಲೇಖಿಸಿ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ತಿರುಪತಿ ಲಡ್ಡು ಪ್ರಸಾದದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವ ಆರೋಪ ಹಿನ್ನೆಲೆ, ಪ್ರಾಯಶ್ಚಿತ್ತವಾಗಿ 11 ದಿನಗಳ ಕಾಲ ''ಪ್ರಾಯಶ್ಚಿತ್ತ ದೀಕ್ಷೆ''ಯನ್ನು ಆರಂಭಿಸಿರುವ ಉಪ ಮುಖ್ಯಮಂತ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಲಡ್ಡು ವಿಷಯವನ್ನು ಹಾಸ್ಯವಾಗಿ ನಗುನಗುತ್ತಾ ಪ್ರಸ್ತಾಪಿಸಿದ ಹಿನ್ನೆಲೆ ಆಕ್ರೋಶಕ್ಕೆ ಗುರಿಯಾಗಿದೆ.
ವಿಜಯವಾಡದ ದೇವಸ್ಥಾನವೊಂದರಲ್ಲಿ ಪತ್ರಿಕಾ ಸಂವಾದದ ವೇಳೆ ನಟ ಕಾರ್ತಿ ಅವರ ಕಾಮೆಂಟ್‌ಗಳ ಬಗ್ಗೆ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರಲ್ಲಿ ಪ್ರಶ್ನಿಸಲಾಯಿತು. ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, "ನಿನ್ನೆ, ಸಿನಿಮಾ ಈವೆಂಟ್ ಒಂದರಲ್ಲಿ ಅವರು ತಿರುಮಲ ಲಡ್ಡುವನ್ನು ಲೇವಡಿ ಮಾಡಿ ಮಾತನಾಡಿದ್ದಾರೆ. ಅವರಿಗೆ ನನ್ನ ಮನವಿಯೇನೆಂದರೆ, ತಿರುಮಲ ಲಡ್ಡು ಬಗ್ಗೆ ಮಾತನಾಡುವ ಮೊದಲು 100 ಬಾರಿ ಯೋಚಿಸಿ. ಇದು ತಮಾಷೆಯ ವಿಷಯವಲ್ಲ. ನಟರಾದ ನಿಮ್ಮನ್ನು ಗೌರವಿಸುತ್ತೇನೆ. ಆದರೆ ನೀವು ಸನಾತನ ಧರ್ಮದ ವಿರುದ್ಧ ಕಾಮೆಂಟ್ ಮಾಡುವುದನ್ನು ನಿಲ್ಲಿಸಬೇಕು'' ಎಂದು ಸಲಹೆ ನೀಡಿದರು.
ಸೆಪ್ಟೆಂಬರ್ 23ರಂದು ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾರ್ತಿ ಲಡ್ಡು ಬಗ್ಗೆ ಮಾತನಾಡಿದ್ದರು. ಅಲ್ಲಿ ಮೀಮ್‌ಗಳನ್ನು ಪ್ರಸ್ತುತಪಡಿಸಲಾಗಿತ್ತು. ಅದರಲ್ಲಿ ಒಂದು ತಿರುಪತಿ ಲಡ್ಡುವನ್ನು ಉಲ್ಲೇಖಿಸಿತ್ತು. ಈ ಮೀಮ್‌ಗೆ ಪ್ರತಿಕ್ರಿಯಿಸಿದ ಕಾರ್ತಿ, "ಇಪ್ಪುಡು ಲಡ್ಡು ಗುರಿಂಚಿ ಮಾಟ್ಲಾಡಕೊದ್ದಡು (ನಾವೀಗ ಲಡ್ಡು ಬಗ್ಗೆ ಮಾತನಾಡಬಾರದು), ಇದು ಸೂಕ್ಷ್ಮ ವಿಷಯ, ಮನಕೊಡ್ಡಾಡಿ (ನಮಗೆ ಬೇಡ)" ಎಂದಿದ್ದರು.