ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ. ನಿನ್ನೆ (ಸೋಮವಾರ) ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಭಂಬ್ಲಾ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯರೊಂದಿಗೆ ಅವರು ಹೋಳಿ ಸಂಭ್ರಮಾಚರಿಸಿದರು. ಇದರ ಬೆನ್ನಲ್ಲೇ ಕೆಲವು ವಿವಾದಗಳು ನಟಿಯನ್ನು ಸುತ್ತಿಕೊಂಡಿವೆ.
2020ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ, ನಟಿ ಹಾಗೂ ರಾಜಕೀಯ ಮುಖಂಡೆಯಾಗಿ ಗುರುತಿಸಿಕೊಂಡಿರುವ ಊರ್ಮಿಳಾ ಮಾತೋಂಡ್ಕರ್ ಅವರನ್ನು 'ಸಾಫ್ಟ್ ಪಾರ್ನ್ ಸ್ಟಾರ್' ಎಂದು ಹೇಳಿ ವಿವಾದಕ್ಕೊಳಗಾಗಿದ್ದರು. ಇದೀಗ ಮಹಿಳೆಯರ ಘನತೆ ಬಗ್ಗೆ ದನಿ ಎತ್ತಿರುವ ಕಂಗನಾರ ಈ ಹಳೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾರ್ವಜನಿಕ ವೇದಿಕೆಯಲ್ಲಿ ನಟಿ ಕೊಟ್ಟ ಹೇಳಿಕೆಗಳು ವಿವಿಧ ಪ್ರತಿಕ್ರಿಯೆ ಪಡೆಯುತ್ತಿವೆ.
ಕಂಗನಾ ಬಗ್ಗೆ ಆಕ್ಷೇಪಾರ್ಹ ಪೋಸ್ಟ್:ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಂಗನಾ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನಾಟೆ ಅವರ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಲೈಂಗಿಕ ನಿಂದನೆಗಳಿಂದ ಕೂಡಿದ ಆಕ್ಷೇಪಾರ್ಹ ಪೋಸ್ಟ್ ಕಾಣಿಸಿಕೊಂಡಿದ್ದು, ವಿವಾದದ ಕಿಡಿ ಹೊತ್ತಿಕೊಂಡಿದೆ. ಈ ಪೋಸ್ಟ್ ಕಂಗನಾರ ಬೋಲ್ಡ್ ಫೋಟೋ ಮತ್ತು ಅವಹೇಳನಾಕಾರಿ ಕ್ಯಾಪ್ಷನ್ ಒಳಗೊಂಡಿದೆ.
ಕಂಗನಾ ಪ್ರತಿಕ್ರಿಯೆ: ಸುಪ್ರಿಯಾ ಶ್ರಿನಾಟೆ ಅವರ ಹೆಸರಿನ ಅಕೌಂಟ್ನಿಂದ ಪೋಸ್ಟ್ ಶೇರ್ ಆದ ಬೆನ್ನಲ್ಲೇ, ಬಿಜೆಪಿ ಅಭ್ಯರ್ಥಿ ಕಂಗನಾ ಕೂಡ ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಪ್ರತೀ ಮಹಿಳೆಯೂ ಘನತೆಗೆ ಅರ್ಹಳು" ಎಂದಿದ್ದಾರೆ.
'ಅಕೌಂಟ್ ಹ್ಯಾಕ್ ಆಗಿದೆ': ಮತ್ತೊಂದೆಡೆ, ಸುಪ್ರಿಯಾ ಶ್ರಿನಾಟೆ ತಮ್ಮ ಅಕೌಂಟ್ ಹ್ಯಾಕ್ ಆಗಿದೆ ಎಂದು ವಿಡಿಯೋ ಸಂದೇಶದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಇದರ ಜೊತೆಗೆ ಆ ಆಕ್ಷೇಪಾರ್ಹ ಹೇಳಿಕೆಗಳ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಆದಾಗ್ಯೂ, ಬಿಜೆಪಿ ಟೀಕಾಸಮರ ನಡೆಸಿದೆ.