ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ಪ್ರೀತಿಸಿ, ದಾಂಪತ್ಯ ಜೀವನ ಆರಂಭಿಸಿ ಹಲವರಿಗೆ ಮಾದರಿಯಾಗಿರೋ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಸಿನಿಮಾ ವಲಯ ಕೂಡಾ ಇದರಿಂದ ಹೊರತಲ್ಲ. ಮೇಡ್ ಫರ್ ಈಚ್ ಅದರ್ ಅನ್ನೋವಂತಹ ಮಾದರಿ ದಂಪತಿ ನಮ್ಮ ಚಂದನವನದಲ್ಲಿವೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ತಾರಾ ದಂಪತಿ.
ಒಂದು ತಿಂಗಳ ಹಿಂದೆಯೇ ಪೋಷಕರಾಗಿ ಬಡ್ತಿ:ಈ ಸ್ಯಾಂಡಲ್ವುಡ್ ಸೆಲೆಬ್ರಿಟಿ ಕಪಲ್ ಒಂದು ತಿಂಗಳ ಹಿಂದಷ್ಟೇ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭವೇ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಹೌದು, 2025ರ ಜನವರಿ ಕೊನೆಗೆ ನಟಿ ಹರಿಪ್ರಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 27ರ ಸಂಜೆ ಸೆಲೆಬ್ರಿಟಿ ಜೋಡಿ ಈ ಶುಭ ಸುದ್ದಿಯನ್ನು ಹಂಚಿಕೊಂಡಿತ್ತು. ಮೊದಲ ಮಗುವನ್ನು ಬರಮಾಡಿಕೊಂಡ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.
ಶಿವರಾತ್ರಿಯೆಂದು ಆಕರ್ಷಕ ವಿಡಿಯೋ:ಮಹಾ ಶಿವರಾತ್ರಿಯಂದು ತಾರಾ ದಂಪತಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಇದು ಮನೆಗೆ ಮರಿಸಿಂಹನ ಆಗಮನ ಹೇಗಿತ್ತು? ಎಂಬುದನ್ನು ಒಳಗೊಂಡಿದೆ. ಕೆಲ ದಿನಗಳ ಹಿಂದೆಯೇ ಮನೆಗೆ ಮಗನ ಪ್ರವೇಶ ಆಗಿದ್ದು, ಮಹಾಶಿವರಾತ್ರಿಯ ಶುಭ ದಿನದಂದು ಆಕರ್ಷಕ ವಿಡಿಯೋ ಹಂಚಿಕೊಂಡಿದ್ದಾರೆ. ಸಿಂಹನ ತೋಳಲ್ಲಿ ಮರಿಸಿಂಹನ ದೃಶ್ಯವನ್ನು ನೋಡೋದೇ ಚೆಂದ ಅನ್ನುತ್ತಿದ್ದಾರೆ ಅಭಿಮಾನಿಗಳು.
ಹರ ಹರ ಮಹಾದೇವ.. ಜೂನಿಯರ್ ಸಿಂಹನಿಗೆ ಒಂದು ತಿಂಗಳು:ಪೋಸ್ಟ್ಗೆ, ''ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು, ಹರ ಹರ ಮಹಾದೇವ, ನಮ್ಮ ಪುಟ್ಟ ಮಗುವಿಗೀಗ ಒಂದು ತಿಂಗಳು. ಹೌದು, ಸಮಯ ಬೇಗನೆ ಕಳೆದು ಹೋಗುತ್ತದೆ. ಜೂನಿಯರ್ ಸಿಂಹನನ್ನು ಮನೆಗೆ ಸ್ವಾಗತಿಸಿದ್ದು ಹೀಗೆ'' ಎಂದು ಬರೆದುಕೊಂಡಿದ್ದಾರೆ.