ಭಾರತೀಯ ಚಿತ್ರರಂಗದ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ನಟನೆಯ 'ವೆಟ್ಟೈಯನ್' ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ಮೇ. 3ರಂದು ಇಬ್ಬರೂ ಸೂಪರ್ ಸ್ಟಾರ್‌ಗಳು ಸೆಟ್‌ನಲ್ಲಿ ಕಾಣಿಸಿಕೊಂಡರು. ಬಿಗ್ ಬಿ ಮತ್ತು ತಲೈವಾ ಬರೋಬ್ಬರಿ 33 ವರ್ಷಗಳ ನಂತರ ಒಟ್ಟಿಗೆ ಕೆಲಸ ಮಾಡುತ್ತಿರುವ ಚಿತ್ರವಿದು.
ಶೂಟಿಂಗ್ ಸೆಟ್‌ನಿಂದ ತಾರೆಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೀಗ, 33 ವರ್ಷಗಳ ನಂತರ ರಜಿನಿಕಾಂತ್ ಜೊತೆ ಕೆಲಸ ಮಾಡಿದ ಅನುಭವವನ್ನು ಸ್ವತಃ ಅಮಿತಾಭ್ ಬಚ್ಚನ್ ಹಂಚಿಕೊಂಡಿದ್ದಾರೆ. ಬಿಗ್ ಬಿ, ರಜನಿಕಾಂತ್ ಅವರೊಂದಿಗಿನ ಫೋಟೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು, ಭಾವನಾತ್ಮಕ ಕ್ಯಾಪ್ಷನ್ ಕೊಟ್ಟಿದ್ದಾರೆ.
ಬಿಗ್ ಬಿ ಹೇಳಿದ್ದಿಷ್ಟು: ''ಥಾಲಾ ದಿ ಗ್ರೇಟ್ ರಜನಿ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುತ್ತಿರುವುದು ಗೌರವಕರ ಕ್ಷಣ. ಅವರು ಸ್ವಲ್ಪವೂ ಬದಲಾಗಿಲ್ಲ. ತಮ್ಮ ಹಿರಿಮೆಯ ಹೊರತಾಗಿಯೂ, ಸೇಮ್ ಸಿಂಪಲ್ ಹಂಬಲ್ ಡೌನ್ ಟು ಅರ್ತ್ ಫ್ರೆಂಡ್'' ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
33 ವರ್ಷಗಳ ನಂತರ ಸ್ಕ್ರೀನ್ ಶೇರ್:ರಜನಿಕಾಂತ್ ಮತ್ತು ಅಮಿತಾಭ್ ಕೊನೆಯದಾಗಿ 1991ರ ಹಮ್ (1991) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ನಂತರ ಇಬ್ಬರು ಸೂಪರ್ ಸ್ಟಾರ್ಸ್ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ 'ವೆಟ್ಟೈಯನ್' ಚಿತ್ರ ವಿಶೇಷವಾಗಿ ಗಮನ ಸೆಳೆದಿದೆ. ಈ ಇಬ್ಬರೂ ದೇಶ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಭಾರತೀಯ ಚಿತ್ರರಂಗದ ಹಿರಿಯ ನಟರು. ಈ ಹಿನ್ನೆಲೆ 'ವೆಟ್ಟೈಯನ್' ಅಭಿಮಾನಿಗಳಿಗೆ ದೊಡ್ಡ ಟ್ರೀಟ್ ಅಂತಲೇ ಹೇಳಬಹುದು.