ನವದೆಹಲಿ:ಹಣಕಾಸು ವಹಿವಾಟಿಗೆ ತ್ವರಿತ ಪಾವತಿ ವ್ಯವಸ್ಥೆಯಾದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವಹಿವಾಟಿನ ಪ್ರಮಾಣವು ಕಳೆದ ಆರು ತಿಂಗಳಲ್ಲಿ 78.97 ಬಿಲಿಯನ್‌ಗೆ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 52 ರಷ್ಟು ಏರಿಕೆ ದಾಖಲಿಸಿದೆ ಎಂದು ವರದಿಯೊಂದು ತಿಳಿಸಿದೆ.
2024 ರ ಮೊದಲಾರ್ಧದಲ್ಲಿ (ಜನವರಿಯಿಂದ ಜೂನ್‌ವರೆಗೆ) ದೇಶದಲ್ಲಾದ ಡಿಜಿಟಲ್ ಪಾವತಿಗಳ ಬಗ್ಗೆ ತಂತ್ರಜ್ಞಾನ ಸೇವಾ ಪೂರೈಕೆದಾರ ವರ್ಲ್ಡ್‌ಲೈನ್ ಗುರುವಾರ ವರದಿ ಪ್ರಕಟಿಸಿದ್ದು, ಇದರಲ್ಲಿ ಯುಪಿಐ ವಹಿವಾಟು ಪಾವತಿ ವ್ಯವಸ್ಥೆಯಲ್ಲಿ ಮುಂದಿದೆ. ಅದರ ವ್ಯಾಪ್ತಿಯೂ ವೇಗವಾಗಿ ವಿಸ್ತರಿಸುತ್ತಿದೆ ಎಂದು ಹೇಳಿದೆ.
ಯುಪಿಐ ಬಳಕೆದಾರರ ಸಂಖ್ಯೆಯು 2023 ರ ಜನವರಿ ತಿಂಗಳಲ್ಲಿ 8.03 ಬಿಲಿಯನ್ನಷ್ಟಿತ್ತು. ಇದು 2024ರ ಜೂನ್ ವೇಳೆಗೆ 13.9 ಬಿಲಿಯನ್‌ಗೆ ಏರಿಕೆ ಕಂಡಿದೆ. ಇದರ ಜೊತೆಗೆ ವಹಿವಾಟಿನಲ್ಲೂ ಹೆಚ್ಚಳವಾಗಿದ್ದು, 2023 ರ ಜನವರಿಯಲ್ಲಿ 12.98 ಟ್ರಿಲಿಯನ್‌ನಷ್ಟಿತ್ತು. 2024ರ ಜೂನ್ ವೇಳೆಗೆ ಇದು 20.07 ಟ್ರಿಲಿಯನ್‌ಗೆ ತಲುಪಿದೆ ಎಂದು ವರದಿಯಲ್ಲಿದೆ.
2023 ರ ಮೊದಲ ಆರು ತಿಂಗಳಲ್ಲಿ ಯುಪಿಐ ವಹಿವಾಟಿನ ಪ್ರಮಾಣವು 51.9 ಬಿಲಿಯನ್ ಡಾಲರ್ನಷ್ಟಿದ್ದರೆ, 2024 ರ ಮೊದಲ ಆರು ತಿಂಗಳಲ್ಲಿ ಇದು 78.97 ಬಿಲಿಯನ್ ಡಾಲರ್ನಷ್ಟು ಏರಿದೆ. ಅಂದರೆ, ಶೇಕಡಾ 52 ರಷ್ಟು ಹೆಚ್ಚಳ ಕಂಡಿದೆ. ಇದೇ ಅವಧಿಯಲ್ಲಿ ವಹಿವಾಟಿನ ಮೌಲ್ಯದಲ್ಲೂ ಶೇಕಡಾ 40 ರಷ್ಟು ಬೆಳವಣಿಗೆಯಾಗಿದ್ದು, 83.16 ಟ್ರಿಲಿಯನ್‌ನಿಂದ 116.63 ಟ್ರಿಲಿಯನ್‌ಗೆ ಹೆಚ್ಚಿದೆ.