ಮುಂಬೈ: ಜಾಗತಿಕ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತೀಯ ಷೇರು ಮಾರುಕಟ್ಟೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಅಕ್ಟೋಬರ್ ನಲ್ಲಿ 179 ಮಿಲಿಯನ್ ಗೆ (ಅಂದರೆ ಸುಮಾರು 17.9ಕೋಟಿ) ಏರಿಕೆಯಾಗಿದೆ ಎಂದು ವರದಿಯೊಂದು ಸೋಮವಾರ ತಿಳಿಸಿದೆ.
ಆದಾಗ್ಯೂ ಅಕ್ಟೋಬರ್ನಲ್ಲಿ ಆರಂಭಿಸಲಾದ ಹೊಸ ಖಾತೆಗಳ ಸಂಖ್ಯೆ 3.5 ಮಿಲಿಯನ್ಗೆ ಇಳಿಕೆಯಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ವರದಿ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ ಸರಾಸರಿ ಮಾಸಿಕವಾಗಿ 3.9 ಮಿಲಿಯನ್ ಹೊಸ ಡಿಮ್ಯಾಟ್ ಖಾತೆಗಳನ್ನು ತೆರೆಯಲಾಗಿದೆ. ಆದರೆ, ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಹೊಸ ಡಿಮ್ಯಾಟ್ ಖಾತೆಗಳ ಸಂಖ್ಯೆ 4 ಮಿಲಿಯನ್ಗಿಂತ ಕಡಿಮೆಯಾಗಿದೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್ಎಸ್ಇ) ಸಕ್ರಿಯ ಗ್ರಾಹಕರ ಸಂಖ್ಯೆ ಅಕ್ಟೋಬರ್ನಲ್ಲಿ ಶೇಕಡಾ 2.4 ರಷ್ಟು (ತಿಂಗಳಿಗೆ) ಏರಿಕೆಯಾಗಿ 48.9 ಮಿಲಿಯನ್ಗೆ ತಲುಪಿದೆ.
CDSL ವರದಿ ಏನು ಹೇಳುತ್ತೆ?:ವರದಿಯ ಪ್ರಕಾರ, CDSL ಅಕ್ಟೋಬರ್ನಲ್ಲಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ ಮತ್ತು ಹೊಸ ಡಿಮ್ಯಾಟ್ ಖಾತೆಗಳ ವಿಷಯದಲ್ಲಿ ಅತ್ಯಧಿಕ ಮಾರುಕಟ್ಟೆ ಪಾಲು ಪಡೆದುಕೊಳ್ಳುತ್ತಿದೆ. ವಾರ್ಷಿಕ ಆಧಾರದ ಮೇಲೆ, NSDL ಒಟ್ಟು / ಹೆಚ್ಚಿದ ಡಿಮ್ಯಾಟ್ ಖಾತೆಗಳಲ್ಲಿ 400 ಬಿಪಿ / 210 ಬಿಪಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದೆ.
ಪ್ರಸ್ತುತ ಎನ್ಎಸ್ಇಯಲ್ಲಿರುವ ಒಟ್ಟಾರೆ ಗ್ರಾಹಕರ ಪೈಕಿ ಅಗ್ರ ಐದು ಡಿಸ್ಕೌಂಟ್ ಬ್ರೋಕರ್ ಕಂಪನಿಗಳು ಶೇಕಡಾ 64.5ರಷ್ಟು ಗ್ರಾಹಕರನ್ನು ಹೊಂದಿವೆ. ಇದು ಅಕ್ಟೋಬರ್ 2023 ರಲ್ಲಿ ಶೇಕಡಾ 61.4 ರಷ್ಟಿತ್ತು. ಆನ್ ಲೈನ್ ಬ್ರೋಕರೇಜ್ ಸಂಸ್ಥೆ ಜೆರೋಧಾ ಗ್ರಾಹಕರ ಸಂಖ್ಯೆ ಶೇಕಡಾ 1.2 ರಷ್ಟು ಏರಿಕೆಯಾಗಿ 8.1 ಮಿಲಿಯನ್ಗೆ ತಲುಪಿದೆ. ಜೆರೋಧಾದ ಮಾರುಕಟ್ಟೆ ಪಾಲು ಶೇಕಡಾ 0.15 ರಷ್ಟು ಕುಸಿದು ಶೇಕಡಾ 16.5 ಕ್ಕೆ ತಲುಪಿದೆ.
ಗ್ರೋ ಗ್ರಾಹಕರ ಸಂಖ್ಯೆ ಶೇಕಡಾ 2.8 ರಷ್ಟು ಏರಿಕೆಯಾಗಿ 12.6 ಮಿಲಿಯನ್ಗೆ ತಲುಪಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 0.20 ರಷ್ಟು ಏರಿಕೆಯಾಗಿ ಶೇಕಡಾ 25.8 ಕ್ಕೆ ತಲುಪಿದೆ. ಏಂಜೆಲ್ ಒನ್ ಗ್ರಾಹಕರ ಸಂಖ್ಯೆ ಶೇಕಡಾ 2.4 ರಷ್ಟು ಏರಿಕೆಯಾಗಿ 7.5 ಮಿಲಿಯನ್ಗೆ ತಲುಪಿದೆ. ಇದು ಶೇಕಡಾ 15.4 ರಷ್ಟು ಸ್ಥಿರವಾದ ಮಾರುಕಟ್ಟೆ ಪಾಲನ್ನು ಹೊಂದಿದೆ. ಅಪ್ ಸ್ಟಾಕ್ಸ್ ಗ್ರಾಹಕರ ಸಂಖ್ಯೆಯು ಶೇಕಡಾ 1.4 ರಷ್ಟು ಏರಿಕೆಯಾಗಿ 2.9 ಮಿಲಿಯನ್ಗೆ ತಲುಪಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 0.05 ರಷ್ಟು ಕುಸಿದು ಶೇಕಡಾ 5.8 ಕ್ಕೆ ತಲುಪಿದೆ.
ಐಸಿಐಸಿಐ ಸೆಕ್ಯುರಿಟೀಸ್ನಂತಹ ಸಾಂಪ್ರದಾಯಿಕ ಬ್ರೋಕರ್ಗಳ ಗ್ರಾಹಕರ ಸಂಖ್ಯೆಯು ಶೇಕಡಾ 0.7 ರಷ್ಟು ಏರಿಕೆಯಾಗಿ 1.9 ಮಿಲಿಯನ್ಗೆ ತಲುಪಿದೆ. ಕೋಟಕ್ ಸೆಕ್ಯುರಿಟೀಸ್ ಗ್ರಾಹಕರ ಸಂಖ್ಯೆಯು ಶೇಕಡಾ 2.8 ರಷ್ಟು ಏರಿಕೆಯಾಗಿ 1.5 ಮಿಲಿಯನ್ಗೆ ತಲುಪಿದೆ. ಇದು ಶೇಕಡಾ 3 ರಷ್ಟು ಸ್ಥಿರವಾದ ಮಾರುಕಟ್ಟೆ ಪಾಲನ್ನು ಹೊಂದಿದೆ. ಎಚ್ಡಿಎಫ್ಸಿ ಸೆಕ್ಯುರಿಟೀಸ್ ಗ್ರಾಹಕರ ಸಂಖ್ಯೆ ಶೇಕಡಾ 3.2 ರಷ್ಟು ಏರಿಕೆಯಾಗಿ 1.3 ಮಿಲಿಯನ್ಗೆ ತಲುಪಿದೆ.
ಇದನ್ನೂ ಓದಿ : ಮದುವೆ ಸೀಸನ್ನಲ್ಲಿ ಶುಭ ಸುದ್ದಿ: ಚಿನ್ನದ ಬೆಲೆ 77 ಸಾವಿರ ರೂ.ಗೆ ಇಳಿಕೆ, ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?