ನವದೆಹಲಿ: ಅರವಿಂದ್ ಕೇಜ್ರಿವಾಲ್ ನಿಜವಾದ ದೇಶಭಕ್ತ ಎಂದು ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ. 'ಕೇಜ್ರಿವಾಲ್ ಕೋ ಆರ್ಶಿವಾದ್' ಅಭಿಯಾನ ಆರಂಭಿಸಲಾಗುತ್ತಿದ್ದು, ಇದಕ್ಕಾಗಿ ವಾಟ್ಸ್ಆ್ಯಪ್ ಸಂಖ್ಯೆ 8297324624 ಕೂಡ ನೀಡಿದ್ದಾರೆ. ಈ ಸಂಖ್ಯೆಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ನಿಮ್ಮ ಪ್ರಾರ್ಥನೆ, ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ಕಳುಹಿಸಬಹುದು ಎಂದು ಅವರು ಹೇಳಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀತಾ ಕೇಜ್ರಿವಾಲ್ ಅವರು, ನಿನ್ನೆ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಾಲಯದಲ್ಲಿ ತಮ್ಮ ಪರ ವಾದ ಮಂಡಿಸಿದ್ದರು. ನೀವೆಲ್ಲರೂ ಕೇಳಿರಬೇಕು, ಇಲ್ಲವಾದರೆ ಖಂಡಿತಾ ಒಮ್ಮೆ ಕೇಳಿ, ಕೋರ್ಟಿನ ಮುಂದೆ ಏನೇ ಹೇಳಿದರೂ ಧೈರ್ಯ ಬೇಕು, ಆತ ಅಪ್ಪಟ ದೇಶಭಕ್ತ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಸರ್ವಾಧಿಕಾರದ ವಿರುದ್ಧ ಹೋರಾಡಿದ್ದು ಹೀಗೆಯೇ. ಕಳೆದ 30 ವರ್ಷಗಳಿಂದ ನಾನು ಅವರೊಂದಿಗೆ ಇದ್ದೇನೆ, ದೇಶಪ್ರೇಮ ಅವರ ಪ್ರತಿ ಅಣು ಅಣುವಿನಲ್ಲೂ ಇದೆ. ಅರವಿಂದ್ ಜಿ ಅವರು ದೇಶದ ಅತ್ಯಂತ ಶಕ್ತಿಶಾಲಿ ಭ್ರಷ್ಟ ಮತ್ತು ಸರ್ವಾಧಿಕಾರಿ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ. ಅರವಿಂದ್ ಜೀ ಅವರನ್ನು ನಿಮ್ಮ ಸಹೋದರ, ನಿಮ್ಮ ಮಗ ಎಂದು ಕರೆದಿದ್ದೀರಿ. ಈ ಹೋರಾಟದಲ್ಲಿ ನಿಮ್ಮ ಸಹೋದರ ಮತ್ತು ನಿಮ್ಮ ಮಗನನ್ನು ನೀವು ಬೆಂಬಲಿಸುವುದಿಲ್ಲವೇ? ಎಂದು ಸುನೀತಾ ಕೇಜ್ರಿವಾಲ್ ಪ್ರಶ್ನಿಸಿದರು.