ಜೈಪುರ, ರಾಜಸ್ಥಾನ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನದ ಮೇಲೆ ಕಾಂಗ್ರೆಸ್ ವಿಶೇಷ ಗಮನ ಹರಿಸಿದೆ. ರಾಜ್ಯ ರಾಜಧಾನಿ ಜೈಪುರದಲ್ಲಿ ಲೋಕಸಭೆ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಸೋನಿಯಾ ಗಾಂಧಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಪ್ರಿಲ್ 6 ರಂದು ಜೈಪುರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, ಈ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು. ಲೋಕಸಭೆ ಚುನಾವಣೆಯ ಪ್ರಚಾರ ಮತ್ತು ಸಭೆಗಳ ಕಾರ್ಯತಂತ್ರವನ್ನು ನಿರ್ಧರಿಸಲು ಇಂದು ಪಿಸಿಸಿ ವಾರ್ ರೂಂನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಸಭೆಯ ನಂತರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುಖಜೀಂದರ್ ಸಿಂಗ್ ರಾಂಧವಾ, ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ಮಾಹಿತಿ ಬಹಿರಂಗ ಪಡಿಸಿದರು. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಾತನಾಡಿ, " ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭಾ ಸಂಸದರಾದವರು. ಇದೀಗ ಸೋನಿಯಾ ಗಾಂಧಿ ಅವರು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಲೋಕಸಭಾ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ." ಎಂದು ಹೇಳಿದರು.
"ಪ್ರಧಾನಿ ಮೋದಿ ಪ್ರತಿಯೊಂದು ಕ್ಷೇತ್ರದಲ್ಲೂ ಅತಿಯಾಗಿಯೇ ಮಾಡಿದ್ದಾರೆ. ಜನರು ಅವರ ಬಗ್ಗೆ ಅತೃಪ್ತರಾಗಿದ್ದಾರೆ. ಕೋಪವೂ ಇದೆ. ಆದರೆ ಆದಾಯ ತೆರಿಗೆ ಇಲಾಖೆ, ಇಡಿ ಭಯದಿಂದ ಯಾರೂ ಮಾತನಾಡುತ್ತಿಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ ಅಂಡರ್ ಕರೆಂಟ್ನಿಂದಾಗಿ ನಮ್ಮ ಸರ್ಕಾರ ಸೋತಿತ್ತು. ಉತ್ತರ ಭಾರತದ ಎಲ್ಲ ಕ್ಷೇತ್ರಗಳಲ್ಲೂ ಪಕ್ಷ ಸೋತಿತ್ತು. ನಾಥೂರಾಂ ಮಿರ್ಧಾ ನಾಗೌರ್‌ನಿಂದ ಏಕೈಕ ಸ್ಥಾನವನ್ನು ಗೆದ್ದಿದ್ದರು. ಸ್ವತಃ ಇಂದಿರಾಗಾಂಧಿಯೂ ಸೋತರು. ಆದರೆ ಮತ್ತೊಮ್ಮೆ ಇಂದಿರಾಗಾಂಧಿ ಸಂಸದೆಯೂ ಆದರು. ಈ ಬಾರಿಯೂ ಅದೇ ರೀತಿಯ ಅಂಡರ್‌ಕರೆಂಟ್ ತನ್ನ ಪರಿಣಾಮವನ್ನು ತೋರಿಸಬಹುದು" ಎಂದು ಹೇಳಿದರು.