ನವದೆಹಲಿ:ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರ ವಿರುದ್ಧ ಮಹಾಭಿಯೋಗ (Impeachment) ನಡೆಸಲು ಕೋರಿ ವಿಪಕ್ಷಗಳು ಸಲ್ಲಿಸಿದ್ದ ನೋಟಿಸ್ ವಜಾಗೊಂಡಿದೆ. ನಿಯಮಗಳು ಪಾಲನೆ ಮಾಡಿಲ್ಲ ಎಂದು ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ವಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ್ದಾರೆ.
ತಮ್ಮ ವಿರುದ್ಧ ಪಕ್ಷಪಾತ ಧೋರಣೆ ಮಾಡುತ್ತಿದ್ದಾರೆ. ಅವರನ್ನು ಪದಚ್ಯುತಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ 60 ಸದಸ್ಯರು ಡಿಸೆಂಬರ್ 10 ರಂದು ರಾಜ್ಯಸಭಾ ಸಭಾಪತಿ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.
ನಿರ್ಣಯ ತಿರಸ್ಕರಿಸಿದ ಉಪ ಸಭಾಪತಿ:ಅವಿಶ್ವಾಸ ನಿರ್ಣಯ ಮಂಡಿಸುವ ಮೊದಲು ಪಾಲಿಸಬೇಕಾದ ನಿಯಮಗಳನ್ನು ವಿಪಕ್ಷಗಳು ಅನುಸರಿಸಿಲ್ಲ. ಮಹಾಭಿಯೋಗಕ್ಕೆ 14 ದಿನಗಳ ಮೊದಲು ನೋಟಿಸ್ ನೀಡಬೇಕಿತ್ತು. ಜೊತೆಗೆ ನಿರ್ಣಯದ ನೋಟಿಸ್ನಲ್ಲಿ ಜಗದೀಪ್ ಧನಕರ್ ಅವರ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ. ಇದು ದೋಷಪೂರಿತವಾಗಿದ್ದು, ನಿರ್ಣಯವನ್ನು ತಿರಸ್ಕರಿಸಲಾಗುತ್ತಿದೆ ಎಂದು ರಾಜ್ಯಸಭಾ ಉಪಸಭಾಪತಿ ಹರಿವಂಶ್ ಅವರು ಹೇಳಿದ್ದಾರೆ.