ನವದೆಹಲಿ: 76ನೇ ಗಣರಾಜ್ಯೋತ್ಸವ ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ದೇಶೀಯ ಶಸ್ತ್ರಾಸ್ತ್ರವಾದ 105 ಎಂಎಂ ಲೈಟ್ ಫೀಲ್ಡ್ ಗನ್ಸ್ ಬಳಸಿ 21 ಗನ್ ಸೆಲ್ಯೂಟ್ ಜೊತೆಗೆ ರಾಷ್ಟ್ರಗೀತೆಯನ್ನು ಮೊಳಗಿಸಲಾಯಿತು.
ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಕರ್ತವ್ಯ ಪಥದಲ್ಲಿ 76ನೇ ಗಣರಾಜ್ಯೋತ್ಸವ ಪರೇಡ್ ಪ್ರಾರಂಭವಾಯಿತು. 'ಸಾರೆ ಜಹಾ ಸೆ ಅಚ್ಚಾ' ಹಾಡನ್ನು 300 ಕಲಾವಿದರ ತಂಡ ಸಂಗೀತ ವಾದ್ಯಗಳ ಮೂಲಕ ನುಡಿಸಿತು. ಪರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಭವ್ನಿಶ್ ಕುಮಾರ್ ಅವರು ಪರೇಡ್ ಮುನ್ನಡೆಸಿದರು. ಪರಮವೀರ ಚಕ್ರ ಮತ್ತು ಅಶೋಕ ಚಕ್ರ ಸೇರಿದಂತೆ ಅತ್ಯುನ್ನತ ಶೌರ್ಯ ಪ್ರಶಸ್ತಿ ಪುರಸ್ಕೃತರು ಪರೇಡ್ ಕಮಾಂಡರ್ ಅನ್ನು ಅನುಸರಿಸಿದರು.
ಕರ್ತವ್ಯ ಪಥದಲ್ಲಿ ಐದು ಸಾವಿರ ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶನ ಮಾಡಿದರು. 10 ಸಾವಿರ ವಿಶೇಷ ಅತಿಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಗಮನ ಸೆಳೆ ಕರ್ನಾಟಕದ ಸ್ತಬ್ಧಚಿತ್ರ:ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯದ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ಗೋವಾ, ಗುಜರಾತ್, ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಹರಿಯಾಣ, ಜಾರ್ಖಂಡ್ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಕರ್ತವ್ಯ ಪಥ ಮೆರವಣಿಗೆಯಲ್ಲಿ ಪ್ರದರ್ಶನಗೊಂಡವು.
ಮೆರವಣಿಗೆಯಲ್ಲಿ ಭಾರತೀಯ ಸೇನೆ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿತು. ಬ್ರಹ್ಮೋಸ್ ಮತ್ತು ಆಕಾಶ್ ಕ್ಷಿಪಣಿಗಳು ಮತ್ತು ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್‌ಗಳು ಮೆರವಣಿಯಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.