ಪಾಟ್ನಾ, ಬಿಹಾರ:ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದಲೇ ಜನ್ ಸೂರಾಜ್ ಅಭಿಯಾನವನ್ನು ನಡೆಸಿರುವ ಹಾಗೂ ರಾಜ್ಯದಲ್ಲಿ ನಿರಂತರ ಪ್ರಚಾರ ಹಾಗೂ ಜನರ ಮೆಚ್ಚುಗೆ ಗಳಿಸಲು ಶತ ಪ್ರಯತ್ನ ಮಾಡುತ್ತಿರುವ ರಾಜಕೀಯ ಹಾಗೂ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಬಹು ದೊಡ್ಡದಾದ ಹಾಗೂ ಭಾರಿ ಗಮನ ಸೆಳೆಯುವ ಪ್ರಕಟಣೆಯೊಂದನ್ನು ಮಾಡಿದ್ದಾರೆ. ಬಿಹಾರದಲ್ಲಿ ತಮ್ಮ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಿದರೆ, ಅಥವಾ ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಒಂದೇ ಒಂದು ಗಂಟೆಯಲ್ಲಿ ಮದ್ಯ ನಿಷೇಧ ತೆಗೆದುಹಾಕುವುದಾಗಿ ಅವರು ಪ್ರಕಟಿಸಿದ್ದಾರೆ.
ಬಿಹಾರದ ದರ್ಭಾಂಗಾದಲ್ಲಿ ಪ್ರಶಾಂತ್ ಕಿಶೋರ್ ಇಂತಹದೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ಮಹಾತ್ಮ ಗಾಂಧೀಜಿ ಅವರ ಬಗ್ಗೆ ಉಲ್ಲೇಖಿಸಿದ ಅವರು, ಈ ಹಿಂದೆ ಮಹಾತ್ಮಾ ಗಾಂಧಿ ಬದುಕಿದ್ದಾಗ ಎಲ್ಲಿಯೂ ಅವರು ಮದ್ಯ ನಿಷೇಧದ ಬಗ್ಗೆ ಮಾತನಾಡಿಲ್ಲ ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ನಮ್ಮ ಸರ್ಕಾರ ರಚನೆಯಾದರೆ ಒಂದು ಗಂಟೆಯೊಳಗೆ ಮದ್ಯಪಾನ ನಿಷೇಧವನ್ನು ಕೊನೆಗೊಳಿಸುತ್ತೇವೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಬಿಹಾರದಲ್ಲಿ ಮದ್ಯ ನಿಷೇಧದಿಂದ ಯಾವುದೇ ಪ್ರಯೋಜನವಿಲ್ಲ ಎಂದು ದರ್ಭಾಂಗದಲ್ಲಿ ನಡೆದ ಜನ್ ಸೂರಾಜ್ ಅಭಿಯಾನದ ವೇಳೆ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ವಾರ್ಷಿಕ 20 ಸಾವಿರ ಕೋಟಿ ನಷ್ಟ: ಬಿಹಾರದಲ್ಲಿ ಮದ್ಯ ನಿಷೇಧ ಮಾಡಿರುವುದರಿಂದ ಸರ್ಕಾರಕ್ಕೆ ವಾರ್ಷಿಕ 20 ಸಾವಿರ ಕೋಟಿ ರೂ ನಷ್ಟ ಉಂಟಾಗುತ್ತಿದೆ. ಬಿಹಾರದಲ್ಲಿ ಬಹಿರಂಗವಾಗಿಯೇ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಹೀಗೆ ಅಕ್ರಮ ವಹಿವಾಟಿನಿಂದ ಸಂಗ್ರಹವಾಗುವ ಹಣ ಭ್ರಷ್ಟ ಅಧಿಕಾರಿಗಳು ಮತ್ತು ಮಾಫಿಯಾಗಳ ಜೇಬಿಗೆ ಸೇರುತ್ತಿದೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ. ತಮ್ಮ ಸರ್ಕಾರ ರಚನೆಯಾದ ಕೂಡಲೇ ಮದ್ಯಪಾನ ನಿಷೇಧವನ್ನು ರದ್ದುಪಡಿಸಲಾಗುವುದು ಎಂದು ಘೋಷಿಸಿದ್ದಾರೆ.